ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತ

Vishwanath S
Updated On : 28 Oct 2013, 12:05 pm

ಕನ್ನಡಪ್ರಭ ವಾರ್ತೆ, ಹಾಸನ, ಅ. 27
ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಈ ಬಗ್ಗೆ ಹಲವು ಬಾರಿ ಮುಖ್ಯಮಂತ್ರಿಗಳ ಮನೆ ಮುಂದೆ ಪಕ್ಷದ ಶಾಸಕರೊಂದಿಗೆ ಧರಣಿ ನಡೆಸಿದ್ದೇವೆ. ಆದರೆ ಯಾವುದಕ್ಕೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದರು.
 ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, ಮಾಜಿ ಪ್ರಧಾನಿ ಅವರ ಜಿಲ್ಲೆಯಲ್ಲಿಯೇ ರಸ್ತೆಗಳು ಹಾಳಾಗಿದೆ ಅಂತ ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಹೇಳಿದ್ದಾರೆ. ಕಳೆದ ಐದುವರೆ ವರ್ಷಗಳಿಂದ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಗಮನ ಹರಿಸಿಲ್ಲ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದ್ದವು. ಆದರೆ ಮುಂದೆ ಬಂದ ಸರ್ಕಾರಗಳು ರಾಜಕೀಯ ದ್ವೇಷದಿಂದ ಇವನ್ನು ತಡೆ ಹಿಡಿದಿವೆ. ಆದ್ದರಿಂದ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಬೆಳಗಾವಿ ಅಧಿವೇಶನ ನಡೆಯುವ ಮುನ್ನ ಸಮಸ್ಯೆ ಬಗೆಹರಿಸದಿದ್ದರೆ ಅಧಿವೇಶನ ಸುಲಭವಾಗಿ ನಡೆಯಲು ಬಿಡುವುದಿಲ್ಲ ಅಂದಿದ್ದಾರೆ ಎಂದರು.
ರಾಜ್ಯ ಸರ್ಕಾರ ಎಷ್ಟೇ ಹೊಸ ಹೊಸ ಯೋಜನೆಗಳನ್ನು ತಂದರೂ ಮುಂದೆ ಅದೇ ಸರ್ಕಾರ ಇರುತ್ತದೆ ಅನ್ನೋ ಗ್ಯಾರಂಟಿ ಇಲ್ಲ ಎಂದ ಅವರು, ಹಾಲು, ಮೊಟ್ಟೆ ಕೊಡುತ್ತೇವೆ ಅಂದ್ರು ಮುಂದೆ ಏನೇನು ಮಾಡುತ್ತಾರೆ ಅಂತ ನೋಡೋಣ ಎಂದು ಹೇಳಿದರು.
2002ರಿಂದ ಗಣಿ ಹಗರಣ ತನಿಖೆಯಾಗಲಿ: ಗಣಿ ಮತ್ತು ಭೂ ಮಾಫಿಯಾದಿಂದ ದೇಶದ ಆರ್ಥಿಕ ವ್ಯವಸ್ಥೆ ನಾಶವಾಗಲು ಕಾರಣವಾಗಿದ್ದು, ರಾಜ್ಯ ಸರ್ಕಾರ 2002ರಿಂದಲೇ ಗಣಿ ಹಗರಣವನ್ನು ತನಿಖೆಗೆ ಒಳಪಡಿಸಲಿ. ಕೇವಲ ಯಡಿಯೂರಪ್ಪ ಅಲ್ಲ ಅವರ ಹಿಂದಿನಿಂದಲೂ ಹಗರಣಗಳು ನಡೆದುಕೊಂಡು ಬಂದಿದೆ. 1995ರಲ್ಲಿ ಗ್ರಾನೈಟ್‌ನಲ್ಲಿಯೂ ಸಹ ಹಗರಣಗಳು ನಡೆದಿದೆ ಎಂದ ಅವರು, ಹಗರಣಗಳನ್ನು ಬಯಲು ಮಾಡೋಕೆ ಸಾಮಾಜಿಕ ಪರಿವರ್ತನಾ ಟ್ರಸ್ಟ್‌ನ ಎಸ್.ಆರ್.ಹಿರೇಮಠ್ ಒಬ್ಬರೇ ಯಾಕೆ ಬೇಕು, ಮುಖ್ಯಮಂತ್ರಿ ಹಗರಣಗಳನ್ನು ಬಯಲಿಗೆಳೆಯಲು ಮುಂದಾಗಲಿ ಎಂದರು.
ಪ್ರಚಾರಕ್ಕೆ ಆರ್‌ಎಸ್‌ಎಸ್‌ನಂಥ ಸಂಸ್ಥೆ ಇರಲಿಲ್ಲ: ದೇವೇಗೌಡರು ಪ್ರಧಾನಿ ಆಗಿದ್ದಾಗ ಯಾರಿಗೂ ಗೊತ್ತಿರಲಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ನಾನು ಶೂದ್ರನಾಗಿದ್ದು, ಪ್ರಧಾನಿ ಆಗುವ ಸಂದರ್ಭದಲ್ಲಿ ಆರ್‌ಎಸ್‌ಎಸ್ ಅಂತಹ ಸಂಸ್ಥೆಯಾಗಲಿ ಅಥವಾ ಇತರೆ ಸಂಸ್ಥೆಯಾಗಲಿ ನನ್ನ ಪರ ಪ್ರಚಾರಕ್ಕೆ ಇರಲಿಲ್ಲ ಎಂದು ತೀಕ್ಷ್ಣವಾಗಿ ಉತ್ತರಿಸಿದ ಅವರು, ನರೇಂದ್ರ ಮೋದಿ ಅವರು ಈಗ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ನಿರ್ಮಿಸಿದ್ದಾರೆ ಅಂತ ಪ್ರಚಾರ ಪಡೆಯುತ್ತಿದ್ದಾರೆ. ಆದ್ರೆ ನಾನು ಪ್ರಧಾನಿ ಆಗಿದ್ದಾಗ ಪಟೇಲರ ಹುಟ್ಟೂರಿಗೆ ಹೋಗಿ ನೋಡಿದಾಗ ಅಲ್ಲಿ ಏನೂ ಇರಲಿಲ್ಲ. ಆಗ ಅಲ್ಲಿನ ಸ್ಥಳೀಯರೊಂದಿಗೆ ಮಾತನಾಡಿ ಪಟೇಲರ ಹೆಸರಿನಲ್ಲಿ ಮೆಮೋರಿಯಲ್ ಹಾಲ್ ನಿರ್ಮಿಸಲು ಒಂದುವರೆ ಕೋಟಿ ರು.ಗಳನ್ನು ನೀಡಿದೆ ಎಂದ ಅವರು, ಆಗ ಪ್ರಚಾರಕ್ಕೆ ಆರ್‌ಎಸ್‌ಎಸ್‌ನಂತಹ ಅಥವಾ ಇತರೆ ಸಂಸ್ಥೆಯಾಗಲಿ ನನ್ನ ಪರ ಇರಲಿಲ್ಲ ಎಂದು ನುಡಿದರು.
ಜಿ. ಕೆಟಗರಿ ನಿವೇಶನ ವಾಪಸ್ ಪಡೆಯಲಿ: ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ನೀಡುವ ಜಿ. ಕೆಟೆಗರಿ ನಿವೇಶನಗಳನ್ನು ಹಿಂದಿನ ಮೂವರು ಸಿಎಂ ಗಳು ಅನರ್ಹರಿಗೆ ನೀಡಿದ್ದಾರೆ ಎಂಬ ಕಾರಣ ಒಡ್ಡಿ ವಾಪಸ್ ಪಡೆಯುವುದಾದರೆ, ಅದಕ್ಕೂ ಹಿಂದಿನ ಸಿಎಂಗಳ ಕಾಲದಲ್ಲಿ ಅನರ್ಹರಿಗೆ ನೀಡಿರುವ ನಿವೇಶನಗಳನ್ನೂ ವಾಪಸ್ ಪಡೆಯಲಿ ಎಂದು ದೇವೇಗೌಡ ಹೇಳಿದರು.
ಧರ್ಮಸಿಂಗ್, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಕಾಲದಲ್ಲಿ ಜಿ ಕೆಟಗರಿ ಅಡಿಯಲ್ಲಿನ ಬಹುಪಾಲು ನಿವೇಶನಗಳ ಹಂಚಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎನ್ನುವುದಾದರೆ, ಸ್ವಲ್ಪ ಹಿಂದಕ್ಕೆ ಹೋದರೆ ಈ ಸಿಎಂ ಗಳ ಹಿಂದಿನ ಮುಖ್ಯಮಂತ್ರಿಗಳ ಕಾಲದಲ್ಲಿ ಸೈಟು ಕೊಟ್ಟು ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಸುಮಾರು 260 ಕೆರೆಗಳನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.
ಕೆರೆಗಳನ್ನು ಸೈಟ್ ಮಾಡಿ ಹಂಚಿಕೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಅಂತ ಮುಖ್ಯಮಂತ್ರಿಗಳೇ ತನಿಖೆ ಮಾಡಲಿ. ನನ್ನ ಅಧಿಕಾರದ ಅವಧಿಯಲ್ಲಿ 14 ವರ್ಷ ಸೈಟ್‌ಗಳನ್ನು ಮಾರಾಟ ಮಾಡುವಂತಿರಲಿಲ್ಲ. ನಾನು ಒಂದೇ ಒಂದು ಸೈಟ್ ಪಡೆದಿಲ್ಲ. ಜೆ.ಎಚ್.ಪಟೇಲ್, ವೀರೇಂದ್ರ ಪಾಟೀಲ್, ಹೆಗಡೆ ಹಾಗೂ ನನ್ನ ಕಾಲದಲ್ಲಿ ನಿವೇಶನ ಹಂಚಿಕೆ ಬಗ್ಗೆ ನೋಡಲಿ ಎಂದ ಅವರು, ಇದಕ್ಕೆ ದೊಡ್ಡ ಭೂತಕನ್ನಡಿ ಹಾಕಿ ಹುಡುಕಿದಂತೆ ಸರ್ಕಾರ ಮಾಡುತ್ತಿದೆ ಎಂದು ಗುಡುಗಿದರು. ಶಾಸಕ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮುಖಂಡ ಕೆ.ಎಂ.ರಾಜೇಗೌಡ, ಚನ್ನವೀರಪ್ಪ ಇತರರು ಇದ್ದರು.
ಗಣಿ ಮತ್ತು ಭೂ ಮಾಫಿಯಾದಿಂದ ದೇಶದ ಆರ್ಥಿಕ ವ್ಯವಸ್ಥೆ ನಾಶವಾಗಲು ಕಾರಣವಾಗಿದ್ದು, ರಾಜ್ಯ ಸರ್ಕಾರ 2002ರಿಂದಲೇ ಗಣಿ ಹಗರಣವನ್ನು ತನಿಖೆಗೆ ಒಳಪಡಿಸಲಿ. ಕೇವಲ ಯಡಿಯೂರಪ್ಪ ಅಲ್ಲ ಅವರ ಹಿಂದಿನಿಂದಲೂ ಹಗರಣಗಳು ನಡೆದುಕೊಂಡು ಬಂದಿದೆ.
-  ಎಚ್.ಡಿ. ದೇವೇಗೌಡ, ಮಾಜಿ ಪ್ರದಾನಿ
ಮೋದಿ ಪ್ರಚಾರದಿಂದ ಆತಂಕವಿಲ್ಲ
ಬಿಜೆಪಿಯ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಭಾಷಣ ಮಾಡುವುದರಿಂದ ನಮಗೆ ಆತಂಕವಿಲ್ಲ. ಅವರೊಬ್ಬ ದೇಶದ ಪ್ರಜೆಯಾಗಿದ್ದು, ಅವರು ಓಡಾಡುವಂತಹ ಹಕ್ಕನ್ನು ಹೊಂದಿದ್ದಾರೆ. ಅವರಿಗೆ ಬರಬಾರದು ಅಂತ ಯಾರೂ ನಿಷೇಧ ಹಾಕಿಲ್ಲ. ಮೋದಿ ಅವರು ಅಭಿವೃದ್ಧಿಯೇ ನಮ್ಮ ಗುರಿ ಅಂತಿದ್ದಾರೆ, ಕಾಂಗ್ರೆಸ್‌ನವರು ಅಮ್ ಆದ್ಮಿ ಅಂತಿದ್ದಾರೆ ಎಂದ ಅವರು, ಮೊದಲು ಮೋದಿ ಅವರು ಇಲ್ಲಿಗೆ ಬಂದು ಭಾಷಣ ಮಾಡಲಿ ಆಮೇಲೆ ನೋಡೋಣ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement