ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವೇಗೌಡರಲ್ಲಿ ಕಾಲು ಸ್ವಾಧೀನ ಕಳಕೊಂಡ ವ್ಯಕ್ತಿಯ ಮೊರೆ...

Vishwanath S
Updated On : 28 Oct 2013, 12:07 pm

ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ, ಅ. 27
ಇದ್ದಕ್ಕಿದ್ದಂತೆಯೇ ಕಾಣಿಸಿಕೊಂಡ ಕಾಲುನೋವಿಗೆ ವೈದ್ಯರ ಸಲಹೆಯಂತೆ ಸಣ್ಣ ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯೊಬ್ಬ, ನಂತರದಲ್ಲಿ ತನ್ನೆರಡೂ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡು, ಸಂಸಾರ ಸಾಗಿಸಲು ದಾರಿ ಕಾಣದೆ ಬದುಕು ಸಾಗಿಸಲು ಸಹಕರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲಿ ಬೇಡಿದ ದೃಶ್ಯ ಎಲ್ಲರ ಮನ ಕಲಕುವಂತಿತ್ತು.
  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾನುವಾರ ಪಟ್ಟಣಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ, ಗೌಡರ ಆಗಮನದ ವಿಷಯ ತಿಳಿದ ಇಲ್ಲಿನ ತಾಪಂ ಮಾಜಿ ಅಧ್ಯಕ್ಷ ಹಾಗೂ  ಲಯನ್ಸ್ ಅಧ್ಯಕ್ಷ ಎಚ್.ಆರ್.ಮುಕುಂದೇಗೌಡ ಅವರ ಸಲಹೆಯಂತೆ ಅರಕಲಗೂಡು ತಾಲೂಕಿನ ಅಂಕನಾಯಕನಹಳ್ಳಿಯ ನಾಗೇಶ(32) ಎಂಬಾತ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಪಟ್ಟಣಕ್ಕೆ ಆಗಮಿಸಿ ದೇವೇಗೌಡರನ್ನು ಕಂಡು ತನ್ನ ದಯನೀಯ ಸ್ಥಿತಿಯನ್ನು ತೆರೆದಿಟ್ಟರು.
  ಬೆಂಗಳೂರಿನ ಬಿಎಂಟಿಸಿಯಲ್ಲಿ ಎರಡು ವರ್ಷ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನಾಗೇಶನಿಗೆ ಇದ್ದಕ್ಕಿದ್ದಂತೆಯೇ ಎರಡೂ ಕಾಲಿನ ಮಂಡಿಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಕೂಡಲೇ ಆತ ಹಾಸನದ ಸರ್ಕಾರಿ ಆಸ್ಪತ್ರೆ ವೈದ್ಯರಲ್ಲಿ ತೋರಿಸಿದಾಗ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ವೈದ್ಯರಲ್ಲಿ ತೋರಿಸುವಂತೆ ಸಲಹೆ ನೀಡಿದ್ದರು. ಕಿದ್ವಾಯಿ ಆಸ್ಪತ್ರೆಯಲ್ಲಿನ ವೈದ್ಯರು ಮಂಡಿಯಲ್ಲಿ ನೀರು ತುಂಬಿದ್ದು, ಅದನ್ನು ಸಣ್ಣ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಬೇಕು ಎಂದು ಹೇಳಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
  ಶಸ್ತ್ರ ಚಿಕಿತ್ಸೆಯ ನಂತರ ಎರಡೂ ಕಾಲುಗಳು ಸ್ವಾಧೀನವಿಲ್ಲದಂತಾಗಿ ನಾಗೇಶ ನಡೆದಾಡಲೂ ಆಗದ ಸ್ಥಿತಿಗೆ ತಲುಪಿದ್ದಾನೆ. ನಂತರದಲ್ಲಿ ಸೊಂಟದಲ್ಲಿ ಕಾಣಿಸಿಕೊಂಡ ನೋವಿಗೆ ಹಾಸನದ ಖಾಸಗಿ ಆಸ್ಪತ್ರೆಯ ವೈದ್ಯರು ಸೊಂಟದಲ್ಲಿ ನರದ ಮೇಲೆ ನರ ಕುಳಿತಿದೆ ಎಂದು ಮಾಡಿದ ಮತ್ತೊಂದು ಶಸ್ತ್ರ ಚಿಕಿತ್ಸೆ ಕೂಡ ಫಲಕಾರಿಯಾಗದೇ ನಾಗೇಶ ಇನ್ನೂ ಮೂಲೆ ಹಿಡಿಯುವಂತಾಗಿದೆ. ಶಸ್ತ್ರ ಚಿಕಿತ್ಸೆಗಳು ನಡೆದು ಮೂರು ವರ್ಷಗಳಿಗೂ ಹೆಚ್ಚು ಕಾಲವಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಈತನಿಗೆ ಇದ್ದ ನೌಕರಿಯೂ ಹೋಗಿದೆ.
  ನಿಲ್ಲುವ ಮತ್ತು ನಡೆಯುವ ಶಕ್ತಿಯನ್ನೇ ಕಳೆದುಕೊಂಡಿರುವ ನಾಗೇಶನಿಗೆ ಪತ್ನಿ ಹಾಗೂ ಒಂದು ಪುಟ್ಟ ಮಗುವಿದೆ, ತಂದೆ, ಅಣ್ಣ ಹಾಗೂ ತಮ್ಮ ಇದ್ದರೂ ಯಾರೊಬ್ಬರೂ ಈತನ ನೆರವಿಗೆ ಬಂದಿಲ್ಲ. ಚಿಕಿತ್ಸೆಗಾಗಿ ತನ್ನಲ್ಲಿದ್ದ ಹಾಗೂ ಸ್ನೇಹಿತರಲ್ಲಿ ಸಾಲ ಮಾಡಿ ಸುಮಾರು 2 ಲಕ್ಷಕ್ಕು ಹೆಚ್ಚು ಖರ್ಚಾಗಿದೆ. ಬರುವ ಕೇವಲ 1 ಸಾವಿರ ಪಿಂಚಣಿ ಹಣ ಯಾವುದಕ್ಕೂ ಸಾಲದು. ದುಡಿಯುವ ಶಕ್ತಿ ಇದ್ದರೂ ನಡೆಯುವ ಶಕ್ತಿಯನ್ನೇ ದೇವರು ಕಿತ್ತುಕೊಂಡಿರುವ ಕಾರಣದಿಂದಾಗಿ ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ಸ್ಥಿತಿಯಲ್ಲಿರುವ ಈತ, ಸಂಸಾರ ನಿರ್ವಹಿಸಲು ದಾರಿಕಾಣದ ಸ್ಥಿತಿ ತಲುಪಿದ್ದಾನೆ.
  ತನ್ನ ಈ ದಯನೀಯ ಸ್ಥಿತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲಿ ಹೇಳಿಕೊಂಡರೆ ಏನಾದರೂ ಪರಿಹಾರ ದೊರಕಬಹುದು ಎನ್ನುವ ಆಶಾಭಾವನೆಯೊಂದಿಗೆ ಶನಿವಾರ ಪಟ್ಟಣಕ್ಕೆ ತನ್ನ ಪತ್ನಿಯೊಂದಿಗೆ ಬಂದಿದ್ದ. ಈತನ ಮೊರೆಯನ್ನು ಆಲಿಸಿದ ದೇವೇಗೌಡರು ಈತನಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರಲ್ಲದೇ, ಈತನ ಪತ್ನಿಗೆ ಅವಕಾಶ ದೊರೆತಲ್ಲಿ ಯಾವುದಾದರೂ ನೌಕರಿ ದೊರಕಿಸಿಕೊಡುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement