ಭರತನಾಟ್ಯ ಉಳಿಸಿ ಬೆಳೆಸಬೇಕಾಗಿದೆ: ದೇವಿಕಾ ಪ್ರಕಾಶ್
ಚನ್ನರಾಯಪಟ್ಟಣ: ಭರತನಾಟ್ಯ ದೇಶಿಯವಾಗಿ ಹಿಂದಿನಿಂದ ಖ್ಯಾತಿ ಪಡೆದಿರುವ ನೃತ್ಯವಾಗಿದ್ದು, ಇದನ್ನು ಇಂದಿನ ಆಧುನಿಕ ಕಾಲದಲ್ಲಿ ಉಳಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ದೇವಿಕಾ ಪ್ರಕಾಶ್ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಜನತೆ ಕಿರುತೆರೆಗೆ ದಾಸ್ಯರಾಗಿರುವುದರಿಂದ ಕಲೆ ಮತ್ತು ನೃತ್ಯಗಳನ್ನು ನೋಡಿ ಪ್ರೋತ್ಸಾಹಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.
ದೇಶೀಯ ಕಲೆಗಳನ್ನು ಉಳಿಸುವುದು ಹಾಗೂ ಪ್ರೋತ್ಸಾಹಿಸುವುದು ತಮ್ಮ ಕರ್ತವ್ಯವಾಗಿದ್ದು, ವಿದೇಶಿ ನೃತ್ಯ ಹಾಗೂ ಸಂಗೀತಕ್ಕೆ ತಾವು ತಿಲಾಂಜಲಿ ಹೇಳಬೇಕಾಗಿದೆ ಎಂದರು.
ಆರ್ಕೆಸ್ಟ್ರಾ ಹಾಗೂ ಅರೆ ಬರೆ ವಸ್ತ್ರಗಳನ್ನು ತೊಟ್ಟು ನಡೆಸುವ ನೃತ್ಯಗಳಿಗೆ ಕೆಲವರು ದಾಸರಾಗಿ ನಿಜವಾದ ಕಲೆಯನ್ನು ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನತೆ ದೇಶೀಯ ಕಲೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಸ್ಪರ್ಧೆ ವಿಜೇತರು: ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭರತ ನಾಟ್ಯ ಸ್ಪರ್ಧೆಯಲ್ಲಿ 10 ತಂಡಗಳು ಭಾಗವಹಿಸಿದ್ದು, ಪಟ್ಟಣದ ಸುಬ್ರತಾ ತಂಡ ಪ್ರಥಮ, ಪೂಜಿತಾ ಮತ್ತು ತಂಡ ದ್ವಿತೀಯ, ಅನುಶ್ರೀ ಹಾಗೂ ಬೇಲೂರಿನ ರಾರಾ ತಂಡ ತೃತೀಯ ಬಹುಮಾನ ಪಡೆದರು.
ಗಣಪತಿ ಸೇವಾ ಸಮತಿ ಗೌರವಾಧ್ಯಕ್ಷ ಪಟೇಲ್ ಮಂಜುನಾಥ್, ಅಧ್ಯಕ್ಷ ಸಿ.ಎನ್. ಅಶೋಕ್, ಕಾರ್ಯದರ್ಶಿ ಸತ್ಯನಾರಾಯಣ್, ಸಹಕಾರ್ಯದರ್ಶಿ ಪ್ರಕಾಶ್ ಜೈನ್ ಇತರರು ಇದ್ದರು.