ರಸ್ತೆಗಳ ಅಭಿವೃದ್ಧಿಯಲ್ಲಿ ಸರ್ಕಾರದ ನಿರ್ಲಕ್ಷ್ಯ: ರೇವಣ್ಣ
ಹಾಸನ: ಹಾಸನ-ಅರಕಲಗೂಡು ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ರಸ್ತೆ ಕಾಮಗಾರಿಗಳನ್ನು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಹಾಸನ-ಅರಕಲಗೂಡು-ರಾಮನಾಥಪುರ-ಬೆಟ್ಟದಪುರ-ಪಿರಿಯಾಪಟ್ಟಣದ ಮೂಲಕ ಕೇರಳಕ್ಕೆ ಮಾರ್ಗ ಕಲ್ಪಿಸುವಂತೆ ರಸ್ತೆ ಕಾಮಗಾರಿಗೆ 240 ಕೋಟಿ ರು.ವೆಚ್ಚದಲ್ಲಿ ಕೆಸಿಎಫ್ 2 ನಲ್ಲಿ ವರ್ಲ್ಡ್ ಬ್ಯಾಂಕ್ ಸಹಕಾರದೊಂದಿಗೆ ಡಿಪಿಆರ್ ಸಿದ್ಧಪಡಿಸಿ, ಇದಕ್ಕಾಗಿ 100 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ನಾನು ಅಧಿಕಾರದಿಂದ ಕೆಳಗಿಳಿದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅದನ್ನು ಬದಲಾಯಿಸಿತು ಎಂದು ತಿಳಿಸಿದರು. ಲೋಕೋಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ರಸ್ತೆ ಕಾಮಗಾರಿಯನ್ನು ಬೇರೆ ಕಡೆಗೆ ಬದಲಾಯಿಸಲು ಮುಂದಾದರೂ. ಆದರೆ ವರ್ಲ್ಡ್ ಬ್ಯಾಂಕ್ ಅದಕ್ಕೆ ತಡೆ ಹಿಡಿಯಿತು. ಅದೇ ರೀತಿಯ ಸಾಲಿಗ್ರಾಮ-ಕೊಣನೂರು ರಸ್ತೆ, ಕೊಡ್ಲಿಪೇಟೆ ರಸ್ತೆ, ವರನಾಡು-ಹಾನಬಾಳು ರಸ್ತೆ ಸೇರಿದಂತೆ ಇತರೆ ರಸ್ತೆಗಳ ಅಭಿವೃದ್ಧಿಗಾಗಿ 4500 ಕೋಟಿ ರು.ಗಳ ಯೋಜನೆಗೆ ವರ್ಲ್ಡ್ ಬ್ಯಾಂಕ್ನಿಂದ ಅನುಮತಿ ಮಾಡಿಸಿದ್ದೆ. ಆದರೆ ಸರ್ಕಾರಗಳು ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಹೇಳಿದರು. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಯಾವುದಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರಾಧಾನ್ಯತೆ ನೀಡುತ್ತದೆ ಎಂಬುದನ್ನು ನೋಡೋಣ ಎಂದರು.