ಸಂತಸ ಸಂತಾನೋತ್ಪತ್ತಿ ಸಂಸ್ಥೆಯ 5ನೇ ವಾರ್ಷಿಕೋತ್ಸವ
ಹಾಸನ: ಯಾವುದೇ ಕ್ಷೇತ್ರದಲ್ಲಾದರೂ ಗುಣಮಟ್ಟದ ಸೇವೆಯಿಂದ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ರಾಮಕೃಷ್ಣ ಭಟ್ ಹೇಳಿದರು.
ನಗರದ ಸಂತಸ ಸಂತಾನೋತ್ಪತ್ತಿ ಸಂಸ್ಥೆಯ 5ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಮಕ್ಕಳಿಲ್ಲದ ದಂಪತಿಗೆ ಉಚಿತ ತಪಾಸಣೆ, ಸಲಹೆ ಹಾಗೂ ಸ್ಕ್ಯಾನಿಂಗ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಾಧುನಿಕ ಸಂತಾನೋತ್ಪತ್ತಿ ಸೇವಾ ಕೇಂದ್ರ ನಡೆಸುವುದು ಬಹಳ ಕಷ್ಟ. ಬೆಂಗಳೂರಿನಲ್ಲಿ ಮಾತ್ರ ಇಂತಹ ಸೇವಾ ಕೇಂದ್ರಗಳು ನಡೆಯುತ್ತಿವೆ. ಆದರೆ ಸಂತಸ ಜಿಲ್ಲಾ ಸಂತಾನೋತ್ಪತ್ತಿ ಸಂಸ್ಥೆಯ ನಿರ್ದೇಶಕಿ ಡಾ. ಸೌಮ್ಯ ದಿನೇಶ್ ಅವರ ತಂಡದವರ ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಸೇವೆಯಿಂದಾಗಿ ಈ ಸಂಸ್ಥೆ ಸುತ್ತಮುತ್ತಲ ಜಿಲ್ಲೆಗಳ ಮಕ್ಕಳಿಲ್ಲದ ದಂಪತಿ ಪಾಲಿನ ಆಶಾಕಿರಣವಾಗಿದೆ ಎಂ ದರು.
ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಲೀಲಾವತಿ ಜನಾರ್ದನ್ ಮಾತನಾಡಿ, ಮಕ್ಕಳಿಲ್ಲದ ಕುಟುಂಬಗಳ ಪಾಲಿಗೆ ಬೆಳಕಾಗಿರುವ ಸಂತಸ ಹಾಸನ ನಿಜಕ್ಕೂ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ಸಂಸ್ಥೆ ನಿರ್ದೇಶಕಿ ಡಾ ಸೌಮ್ಯ ದಿನೇಶ್ ಮಾತನಾಡಿದರು. ಡಾ. ಗಿರಿಜಾ, ಡಾ. ಶ್ರೀನಿವಾಸ್, ಡಾ. ಸಾವಿತ್ರಿ, ಡಾ. ರಂಗಲಕ್ಷ್ಮಿ, ಡಾ. ಸೌಮ್ಯಾ ಮಣಿ, ಡಾ. ನೀತಾ ಕಿರಣ್ ಇತರರು ಇದ್ದರು.
ಮನೆ ಮನೆಗೆ ವಿವೇಕಾನಂದ ಸಾಹಿತ್ಯ ಪ್ರಚಾರ
ಜಾವಗಲ್: ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ, ಅವರ ಸಾಹಿತ್ಯ ಮತ್ತು ಜೀವನ ಚರಿತ್ರೆ ಪುಸ್ತಕಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗುವುದು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಪ್ರಾಂತ್ಯಾಧಿಕಾರಿ ಸತ್ಯನಾರಾಯಣ್ ತಿಳಿಸಿದರು. ಈ ಸಂಬಂಧ ಇಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ವಿವೇಕಾನಂದರ ಕುರಿತು ವಿಚಾರ ಗೋಷ್ಠಿ ಏರ್ಪಡಿಸಲಾಗುವುದು ಎಂದರು.
ಜಾವಗಲ್ ಹೋಬಳಿ ಬಿಜೆಪಿ ಘಟಕ ಅಧ್ಯಕ್ಷ ಶಾಂತಕುಮಾರ ಮಾತನಾಡಿ, ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಅವರನ್ನು ಸ್ವಾಗತಿಸಬೇಕು ಎಂದು ಹೇಳಿದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಬೇಲೂರು ಮಂಡಲ ಬಿಜೆಪಿ ಉಪಾಧ್ಯಕ್ಷ ರೇಣುಕಾ ಪ್ರಸಾದ್, ಗ್ರಾಪಂ ಸದಸ್ಯ ರಮೇಶ್ ನೇರ್ಲಿಗೆ ಕರುಣಾಕರ, ಮೋಹನ್ಬಾಬು, ಭದ್ರೇಶ್, ಗ್ರಾಪಂ ಮಾಜಿ ಸದಸ್ಯೆ ಕುಸುಮಾ ಇದ್ದರು.
ಮಾದಾಪುರದಲ್ಲಿ ಚಿರತೆ
ಅರಕಲಗೂಡು: ಸಮೀಪದ ಮುಂಡಗೋಡು ಮಾದಾಪುರ ಬಳಿಯ ತೋಟದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಭಾನುವಾರ ಬೆಳಗ್ಗೆ ಚಿರತೆಯನ್ನು ಕಂಡು ಭಯಭೀತರಾದ ಜನ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ವಲಯ ಅರಣ್ಯಾಧಿಕಾರಿ ವಿ.ಪಿ.ಹಡ್ಲೇರಿ, ಫಾರೆಸ್ಟರ್ ದೇವರಾಜ್ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು, ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ ಸಮೀಪದಲ್ಲೇ ಬೋನು ಇರಿಸಿದ್ದಾರೆ. ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯ ಅರಿವಳಿಕೆ ತಜ್ಞ ಸಂಜಯ್ಗುಬ್ಬಿ ಮತ್ತು ವೆಂಕಟೇಶ್ ಅವರನ್ನು ಕರೆಸಲಾಗಿದೆ.ತೋಟದಲ್ಲಿ ಕಾಣಿಸಿಕೊಂಡ ಚಿರತೆ ಸಂಜೆಯವರೆಗೂ ಸ್ಥಳ ಬದಲಾವಣೆ ಮಾಡಿಲ್ಲ. ಚಿರತೆ ಗಾಯಗೊಂಡು ಸ್ಥಳ ಬದಲಾವಣೆಗೆ ಸಾಧ್ಯವಾಗದಿರಬಹುದೆಂದು ಶಂಕಿಸಲಾಗಿದೆ.
ಕ್ಯಾಂಪಸ್ ಪ್ಲೇಸ್ಮೆಂಟ್: 101 ವಿದ್ಯಾರ್ಥಿಗಳ ಆಯ್ಕೆ - ಪ್ರಾಂಶುಪಾಲ
ಹಾಸನ: ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ 101 ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಆಯ್ಕೆಗೊಂಡಿದ್ದಾರೆ. ಆರ್ಥಿಕ ಹಿಂಜರಿತದ ಒತ್ತಡದಲ್ಲಿರುವ ಸಾಫ್ಟ್ವೇರ್ ಕಂಪನಿಗಳು ಆಯ್ಕೆ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಸಂದರ್ಭದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಡಾ. ಎಂ.ವಿ. ಸತ್ಯನಾರಾಯಣ ಹೇಳಿದರು.
ಈ ಬಾರಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ 20, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ 45, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ 13, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ 11, ಇನ್ಮೆಂಟೇಶನ್ ಟೆಕ್ನಾಲಜಿ ವಿಭಾಗದ 5, ಇನ್ಫಫರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ 4 ಮತ್ತು ಸಿವಿಲ್ ವಿಭಾಗದ 3 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಎಂ.ಕೆ. ರವಿಶಂಕರ್ ತಿಳಿಸಿದರು.
ಕಂಪನಿಯ ಹಿರಿಯ ಅಧಿಕಾರಿ ಚಕ್ರವರ್ತಿ ಅವರು ಎಂಸಿಇ ವಿದ್ಯಾರ್ಥಿಗಳ ತಾಂತ್ರಿಕ ನಿಪುಣತೆ, ನಿಷ್ಠೆ ಮತ್ತು ಸಮಯ ಪಾಲನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ ಪ್ರಾಂಶುಪಲ ಡಾ. ಕೆ.ಎಸ್. ಜಯಂತ ಮಾತನಾಡಿ, ಮುಂದಿನ ದಿನಗಳಲ್ಲಿ ಟೆಕ್ ಮಹಿಂದ್ರ, ಇನ್ಫೋಸಿಸ್, ಐಆ ಮತ್ತು ಸೊಸೈಟಿ ಜನರೆಲ್ ಕಂಪನಿಗಳು ಬರಲಿದ್ದು, ಇನ್ನುಳಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಳ್ಳುವರೆಂಬ ಆಶಾಭಾವನೆ ವ್ಯಕ್ತಪಡಿಸಿದರು.
ನಾನಾ ಹೊಸ ತಳಿ ಬೆಳೆಗಳ ವೀಕ್ಷಣೆ
ಚನ್ನರಾಯಪಟ್ಟಣ: ತಾಲೂಕಿನ ಕೆಲವೆಡೆ ಬೆಳೆದಿರುವ ಹೊಸ ತಳಿಯ ರಾಗಿ, ಬತ್ತ, ತೊಗರಿ ಮತ್ತು ಕಬ್ಬಿನ ಬೆಳೆ ಗಳನ್ನು ಹಾಸನ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು ಮತ್ತು ಅಧಿಕಾರಿಗಳ ತಂಡ ಹಾಗೂ ಕೃಷಿ ವಿಜ್ಞಾನಿಗಳು ವೀಕ್ಷಿಸಿದರು.
ಶಿವರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಕರಡೇವಿನಲ್ಲಿ ಬೆಳೆದಿರುವ ಅಕ್ಷಯ ದಾತ್ ಐಇಟಿ 21214 (ಕೆಪಿಆರ್1) ಬತ್ತದ ತಳಿ ಉತ್ತಮವಾಗಿ ಬಂದಿದೆ. ಬರಗೂರಿನಲ್ಲಿ ಎಂಟಿ 1060 ಮತ್ತು ಎಂಎಲ್ 365 ಹೊಸ ರಾಗಿ ತಳಿಗಳು ಮಳೆಯಾಶ್ರಯದಲ್ಲಿ ಉತ್ತಮವಾಗಿ ಬೆಳೆದಿವೆ. ಕಸಬಾ ಹೋಬಳಿ ಗುಲಸಿಂದ ಹಾಗೂ ದ್ವರೆಯಲ್ಲಿ ಕೆಎಂಆರ್ 204 ಮತ್ತು ಕೆಆರ್ಎಚ್4ರಾಗಿ ತಳಿಗಳನ್ನು ಬೆಳೆಯಲಾಗಿದ್ದು, ಇಲಾಖೆ ವತಿಯಿಂದ 2 ತಿಂಗಳಿಗೊಮ್ಮೆ ಕ್ಷೇತ್ರ ಅಧ್ಯಯನ ಮಾಡಿ ರೈತರು ಮಾದರಿಯಾಗಿ ಬೆಳೆದ ಬೆಳೆ ಗಳನ್ನು ಕೃಷಿ ಸಿಬ್ಬಂದಿ ಹಾಗೂ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಶ್ರೀನಿವಾಸಪುರದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮೇ 2013ರಲ್ಲಿ 6 ಅಡಿ ಅಂತರದಲ್ಲಿ ಮಣ್ಣಿನ ಒಳಗಡೆಯೇ ಹನಿ ನೀರಾವರಿ ಪೈಪ್ ಅಳವಡಿಸಿ ಸಿ086032 ಮಾದರಿಯ ಕಬ್ಬನ್ನು ನಾಟಿ ಮಾಡ ಲಾಗಿದೆ ಎಂದು ತಿಳಿಸಿದರು.
ಕಾರ್ಖಾನೆಯ ಗೌರವಾಧ್ಯಕ್ಷ ಬ್ರಿಟ್ಟೋ ಮಾತನಾಡಿ, ಗೊಬ್ಬರ ಹಾಗೂ ಔಷಧಿಯನ್ನು ಪೈಪುಗಳ ಮೂಲಕವೇ ಏಕಕಾಲದಲ್ಲಿ ಸರಬ ರಾಜು ಮಾಡಲಾಗುತ್ತದೆ. 6 ಅಡಿ ಅಂತರ ವಿರುವುದರಿಂದ ಮೊದಲ ಮೂರು ತಿಂಗಳು ಅಂತರ ಬೆಳೆಯಾಗಿ ತರಕಾರಿಗಳನ್ನು ಬೆಳೆಯ ಬಹುದು ಎಂದು ತಿಳಿಸಿದರು.
ವಿಜ್ಞಾನಿಗಳಾದ ಎಂ.ಪಿ. ರಾಜಣ್ಣ, ಕೆ. ಟಿ. ಶಿವಶಂಕರ್, ಸಹಾಯಕ ಕೃಷಿ ನಿರ್ದೇಶಕ ಕೆ. ಆರ್. ಮಲ್ಲೇಶಗೌಡ ಇದ್ದರು.
ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಸಲಹೆ
ಬೇಲೂರು: ಪಟ್ಟಣದಲ್ಲಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ತಮ್ಮ ಅಂಗಡಿಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಎಸ್ಐ ಅಶ್ವಿನ್ಕುಮಾರ್ ಸಲಹೆ ನೀಡಿದರು.ಜಿಲ್ಲಾ ಎಸ್ಪಿ ಆದೇಶದಂತೆ ಬ್ಯಾಂಕ್, ಫೈನಾನ್ಸ್, ಲಾಡ್ಜ್, ಪೆಟ್ರೋಲ್ಬಂಕ್,ಚಿತ್ರಮಂದಿರ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಬಾಗಿಲು ಹಾಕಿದಾಗ ಮತ್ತು ರಾತ್ರಿ ವೇಳೆ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಇಲ್ಲದಿದ್ದಲ್ಲಿ ನಿಮ್ಮದೇ ನಿರ್ಲಕ್ಷ್ಯವೆಂದು ಪರಿಗಣಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.