ಕಾಮಗಾರಿ ಪೂರ್ಣಗೊಳಿಸಲು ಮತ್ತೆ ಪ್ರಧಾನಿಯಾಗಿ ಬರಬೇಕೇ!
ಆಲೂರು: ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ದೇವೇಗೌಡರೇ ಮತ್ತೆ ಪ್ರಧಾನಿಯಾಗಿ ಬರಬೇಕೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಯರ ಕೊಪ್ಪಲಿನ ಸಭೆಯಲ್ಲಿ ಹಾಸ್ಯ ಚಟಾಕಿ ಹರಿಸಿದರು.
ತಾಲೂಕು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ನೀವು ಪ್ರಧಾನಿಯಾದ ಸಂದರ್ಭದಲ್ಲಿ ಆರಂಭವಾದ ಮಡಿಕೇರಿಯನ್ನು ಸಂಪರ್ಕಿಸುವ ಜನಾರ್ದನಳ್ಳಿ -ಭರತೂರು ಸೇತುವೆ ಇನ್ನೂ ಶೇ.75 ರಷ್ಟು ಪೂರ್ಣಗೊಂಡಿಲ್ಲವೆಂದು ತಿಳಿಸಿದಾಗ ಗೌಡರು ಈ ರೀತಿ ನಗೆ ಚಟಾಕಿ ಹಾರಿಸಿದರು.
ನಂತರ ಮಾತನಾಡಿದ ಅವರು ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರಾರಂಭಗೊಂಡ ಹಲವಾರು ಯೋಜನೆಗಳು ಸಹ ಪೂರ್ಣಗೊಳ್ಳದೆ ಇರುವುದು ಬೇಸರ ತರಿಸಿದೆ. ಜಿಲ್ಲೆ ಅಭಿವೃದ್ಧಿ ಗೊಳ್ಳಲೆಂದು ಮಂಗಳೂರು ಬಂದರು ಹಾಗೂ ಚೆನ್ನೈ ಬಂದರು ಸಂಪರ್ಕಿಸಲು ಬೆಂಗಳೂರು-ಮಂಗಳೂರು ರೇಲ್ವೆ ಕಾರ್ಯ ಪ್ರಾರಂಭಿಸಲಾಯಿತು. ಅದು ಪೂರ್ಣಗೊಳ್ಳಲು ಇಷ್ಟು ವರ್ಷ ಬೇಕಾಯಿತೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ರೈತರು ಬೆಳೆದ ಬೆಳೆ ತ್ವರಿತವಾಗಿ ಬೇರೆಡೆಗೆ ಸಾಗಿಸಲು ವಿಮಾನ ನಿಲ್ದಾಣ ಕಾರ್ಯ ಪ್ರಾರಂಭಿಸಲಾಯಿತು ಅದೂ ಸಹ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ಸಂಪರ್ಕಿಸುವ ರೈಲುಮಾರ್ಗ ಪೂರ್ಣಗೊಂಡಿಲ್ಲ. ಹಾಸನ-ಬೇಲೂರು-ಶೃಂಗೇರಿ ಮೂಲಕ ಶಿವಮೊಗ್ಗ - ಹರಿಹರ ಸಂಪರ್ಕಿಸುವ ರೈಲು ಮಾರ್ಗ ಕನಸಾಗಿಯೇ ಉಳಿದಿದೆ. ಈ ರೀತಿ ಹಲವಾರು ಜನಪರ ಯೋಜನೆಗಳು ಅಪೂರ್ಣಗೊಂಡು ನೆನೆಗುದಿಗೆ ಬಿದ್ದಿವೆ. ಇದು ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯವನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
ಉಳಿದಿರುವ 6 ತಿಂಗಳಲ್ಲಿ ಸಂಸದರ ಅನುದಾನದಲ್ಲಿ ಆನೆ ಹಾವಳಿ ಪೀಡಿತ ಪ್ರದೇಶಕ್ಕೆ ಹೆಚ್ಚು ಒತ್ತು ನೀಡುವೆ ಹಾಗೂ ರಸ್ತೆಗಳ ನಿರ್ಮಾಣಕ್ಕಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅನುದಾನ ತರುವೆ ಎಂದ ಅವರು ಮರಳಿಗಾಗಿ ಜಿಲ್ಲೆಯಲ್ಲಿ ಜನ ಪರದಾಡುತ್ತಿದ್ದು ಹೊಸ ಮರಳು ನೀತಿ ಜಾರಿಗೆ ತರಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.