ನಗರದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಅ. 29
ಕರ್ನಾಟಕ ರಾಜ್ಯ ಹಣಕಾಸು ಮುಕ್ತನಿಧಿ ಯೋಜನೆಯ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸರ್ಕಾರ ಪ್ರತಿವರ್ಷ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ನಾನಾ ಇಲಾಖೆಯಿಂದ ಆರ್ಥಿಕ ಸಹಾಯ ಮಾಡುತ್ತಾ ಬಂದಿದೆ. ಹಾಸನ ನಗರಸಭೆ ಮುಖಾಂತರ ಬಡ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ವೈಯಕ್ತಿಕ ವ್ಯವಹಾರ ಹಾಗೂ ಸಣ್ಣ ಉದ್ದಿಮೆ ಪ್ರಾರಂಭಿಸಲು ಶೇ.50ರಷ್ಟು ಧನ ಸಹಾಯವನ್ನು ನೀಡುತ್ತೆ. ಈ ಯೋಜನೆಯ ಧನ ಸಹಾಯ ಪಡೆಯಲು ನಗರದ ಆಟೋ ಚಾಲಕರು, ಸಣ್ಣ ವ್ಯಾಪಾರಸ್ಥರು ಹಾಗೂ ಹೊಸದಾಗಿ ಸಣ್ಣ ಉದ್ದಿಮೆ ಪ್ರಾರಂಭಿಸಲು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು.
ಒಬ್ಬ ಅಭ್ಯರ್ಥಿಗೆ ಎರಡು ಬಾರಿ ಧನ ಸಹಾಯ: ನಗರದ ಹಲವು ಬ್ಯಾಂಕ್ ಮುಖಾಂತರ ಫಲಾನುಭವಿಗಳಿಗೆ ಸಾಲ ಮತ್ತು ಧನಸಹಾಯ ದೊರೆತಿದೆ. ಇನ್ನು ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನಂತರ ಬ್ಯಾಂಕ್ ಒಪ್ಪಿಗೆ ಪತ್ರ ನಗರಸಭೆಗೆ ಕಳುಹಿಸಿ ಪುನ: ನಗರಸಭೆಯಿಂದ ಧನಸಹಾಯದ ಚೆಕ್ ಬ್ಯಾಂಕ್ಗೆ ತಲುಪಿರುವ ಅರಿವು ನಗರಸಭೆಗೆ ಇಲ್ಲ. ಸುಮಾರು 6 ರಿಂದ 10 ತಿಂಗಳು ಕಳೆದರೂ ಇವರಿಗೆ ಇದರ ಜ್ಞಾನವೇ ಇಲ್ಲವಾಗಿದೆ. ಒಬ್ಬ ಅಭ್ಯರ್ಥಿಗೆ ಎರಡು ಬಾರಿ ಧನ ಸಹಾಯ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯಲ್ಲಿ 2012-13ನೇ ಸಾಲಿನಲ್ಲಿ ರಾಜ್ಯ ಹಣಕಾಸು ಮುಕ್ತನಿಧಿ ಯೋಜನೆಯ ಶೇ.22.75, ಶೇ.7.25 ಮತ್ತು ಶೇ.3ರಲ್ಲಿ ಜಾರಿಯಾಗುವ ಶೇ.50 ಧನಸಹಾಯದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಅ.23ರಂದು ಪೊಲೀಸರು ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮತ್ತು ಮಧ್ಯವರ್ತಿ ನಗರಸಭಾ ಸದಸ್ಯರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.
ಫಲಾನುಭವಿಗಳಿಗೆ ಇದರ ಅರಿವೇ ಇಲ್ಲ: ಫಲಾನುಭವಿಗಳು ಯೋಜನೆಗೆ ಸಂಬಂಧಿಸಿದಂತೆ ನಗರಸಭೆಗೆ ಅರ್ಜಿ ಸಲ್ಲಿಸಿ ಇವರಿಗೆ ಒಪ್ಪಿಗೆ ಪತ್ರ ನೀಡುವ ಬ್ಯಾಂಕ್ಗಳಿಗೆ ಅರ್ಜಿಯಲ್ಲಿ ಬ್ಯಾಂಕಿನ ಹೆಸರು ನಮೂದಿಸಿದ್ದಾರೆ. ಹಾಗೆ ನಗರಸಭೆಯವರು ಬ್ಯಾಂಕಿಗೆ ಹಿಂಬರಹ ಬರೆದ ನಂತರ ಬ್ಯಾಂಕ್ ಮತ್ತೆ ನಗರಸಭೆಗೆ ಅಭ್ಯರ್ಥಿ ಹೆಸರಿನ ಒಪ್ಪಿಗೆ ಪತ್ರ ಕಳುಹಿಸಿದ್ದಾರೆ. ನಂತರ ನಗರಸಭೆಯಿಂದ ಅಭ್ಯರ್ಥಿ ಹೆಸರಿನ ಶೇ.50 ಧನ ಸಹಾಯದ ಚೆಕ್ಕನ್ನು ಬ್ಯಾಂಕ್ಗೆ ಕಳುಹಿಸಿ ಕೊಡಲಾಗುತ್ತೆ. ಆದರೆ ಬಹಳಷ್ಟು ಫಲಾನುಭವಿಗಳಿಗೆ ಇದರ ಅರಿವೇ ಇಲ್ಲ ತಮ್ಮ ಹಣ ಬ್ಯಾಂಕಿಗೆ ಬಂದಿದೆ ಅಂತ.
ಇಲ್ಲಿ ಅವ್ಯವಹಾರ ನಡೆಯಲು ಮುಖ್ಯ ಕಾರಣ ಧನ ಸಹಾಯ ಮತ್ತು ಸಾಲ ಜಾರಿಯಾಗುವ ಅಭ್ಯರ್ಥಿಯ ಅಧಿಕೃತ ಖಾತೆಯ ಪಾಸ್ ಪುಸ್ತಕ, ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ನೇರವಾಗಿ ಅಭ್ಯರ್ಥಿಯ ಕೈಗೆ ನೀಡದಿರುವುದು ಹಾಗೂ ಶೇ.7.25 ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ಎರಡೆರಡು ಬಾರಿ ಹಣ ಜಾರಿಯಾಗಿದೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
2012-13ನೇ ಸಾಲಿನಲ್ಲಿ ತಲಾ 25 ಸಾವಿರ ರು.ನಂತೆ ಸುಮಾರು 48 ಫಲಾನುಭವಿಗಳ ಧನ ಸಹಾಯದ ಚೆಕ್ ಹಾಗೂ ಪಟ್ಟಿ ಎಚ್ಡಿಎಫ್ಸಿ ಬ್ಯಾಂಕ್ಗೆ ನಗರಸಭೆ ಕಳುಹಿಸಿತ್ತು. ಆದರೆ ಕಳೆದ ವಾರ 48 ಫಲಾನುಭವಿಗಳ ಧನ ಸಹಾಯದ ಚೆಕ್ ಹಾಗೂ ಪಟ್ಟಿಯನ್ನು ನಗರಸಭೆ ಟಪಾಲ್ರವರಿಗೆ ನೀಡಿ ಕಾರಣ ನೀಡದೆ ಹಿಂದಿರುಗಿಸಿದ್ದಾರೆ.
ಇಲ್ಲಿ ಅವ್ಯವಹಾರ ನಡೆಯಲು ಫಲಾನುಭವಿಗಳಿಗೆ ಬ್ಯಾಂಕ್ಗೆ ಸಂಬಂಧಿಸಿದ ದಾಖಲೆಗಳ ಎಟಿಎಂ ಪಾಸ್ಬುಕ್, ಬಾಂಡ್ಗಳನ್ನು ನೇರವಾಗಿ ನೀಡದಿರುವುದು ಹಾಗೂ ಎಷ್ಟೋ ಅಭ್ಯರ್ಥಿಗಳಿಗೆ ಹಣ ಜಾರಿಯಾದರೂ ಇದರ ಸಾಲ ಅಥವಾ ಧನ ಸಹಾಯದ ಹಣ ದೊರೆತಿಲ್ಲ ಎಂದು ದೂರಿದರು.
ಜನಪ್ರತಿನಿಧಿಗಳೂ ಶಾಮೀಲು: ಎಚ್ಡಿಎಫ್ಸಿ ಬ್ಯಾಂಕ್ನವರು ವಾಪಸ್ ಕಳುಹಿಸಿರುವ ಪಟ್ಟಿಯನ್ನು ವಾಪಸ್ ತರಿಸಿ ಅಭ್ಯರ್ಥಿಗಳಿಗೆ ಕೊಡುವ ವ್ಯವಸ್ಥೆ ಮಾಡಬೇಕು ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಅವ್ಯವಹಾರದಲ್ಲಿ ಇತರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿದ್ದು, ಅವರ ವಿರುದ್ಧ ತನಿಖೆ ನಡೆಸಿ ಬಂಧಿಸುವಂತೆ ಪಟ್ಟುಹಿಡಿದರು.
ಜಿಲ್ಲಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಖಾಸಗಿ ಬ್ಯಾಂಕ್ಗಳಲ್ಲಿ ಸಬ್ಸಿಡಿ ನೆಪದಲ್ಲಿ ಫಲಾನುಭವಿಗಳಿಗೆ ವಂಚಿಸಿ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರನ್ನು ಬಂಧಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಹರೀಶ್ಗೌಡ, ನಗರಾಧ್ಯಕ್ಷ ಶಿವು, ತಾಲೂಕು ಅಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಹರೀಶ್ಕುಮಾರ್, ಬಳಗಟ್ಟ ಲೋಕೇಶ್, ಮಂಜುನಾಥ್, ಜಮೀರ್, ಸಮೀರ್ ಇತರರು ಇದ್ದರು.