ನಾಳೆ ಟಿಪ್ಪು ಸಂಘರ್ಷ ಸಮಿತಿಯಿಂದ ಬೃಹತ್ ಧರಣಿ
ಕ.ಪ್ರ. ವಾರ್ತೆ ಹಾಸನ ಅ. 28
ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಒತ್ತಾಯಿಸಿ ಅ.30ರಂದು ಬೃಹತ್ ಧರಣಿ ನಡೆಸುವುದಾಗಿ ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶಿರ್ ಅಹಮದ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹಾನೀಯರು ತಮ್ಮ ತನು, ಮನ, ಪ್ರಾಣವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಕನ್ನಡಕ್ಕಾಗಿ ಸಾಕಷ್ಟು ಶ್ರಮಿಸಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು.
ವಿದ್ಯೆ ಹಾಗೂ ಆಡಳಿತದ ಅನುಭವವನ್ನು ತಮ್ಮ ತಂದೆಯಿಂದ ಪಡೆದ ಟಿಪ್ಪು ಅತ್ಯಂತ ಪ್ರಗತಿಪರ, ಸಾಮಾಜಿಕ ಕಳಕಳಿ ಹಾಗೂ ದೂರದೃಷ್ಟಿವುಳ್ಳವರಾಗಿದ್ದರು. ಟಿಪ್ಪು ಆಳ್ವಿಕೆಯಲ್ಲಿ ದಲಿತರಿಗೆ ನ್ಯಾಯ ಸಮ್ಮತವಾದ ಹಕ್ಕುಗಳು ಮತ್ತು ಸ್ವಾವಲಂಬನೆ, ಅಸ್ಪೃಶ್ಯ ನಿಷೇಧ, ಹೆಣ್ಣುಮಕ್ಕಳಿಗೆ ಶಿಕ್ಷಣ, ಪಶು ಸಂಗೋಪನೆ ಇಲಾಖೆಯಲ್ಲಿ ಹಾಲು ಕೊಡುವ ಹಸುಗಳನ್ನು ವಧಿಸುವುದನ್ನು ನಿಷೇಧ, ಆಧುನಿಕರಿಸಿದ ಕೃಷಿ, ರೇಷ್ಮೆ ಬೆಳೆ, ದೇಶದಲ್ಲಿ ಮೊಟ್ಟ ಮೊದಲಿಗೆ ಉಳುವವನಿಗೆ ಭೂಮಿಯನ್ನು ನೀಡಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ ಎಂದರು.
ಟಿಪ್ಪು ಚಿತ್ರವಿರುವ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಬೇಕು. ರಕ್ಷಣಾ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಹಾಗೂ ಈ ನೆಲಕ್ಕಾಗಿ ತಮ್ಮ ಅಪ್ರತಿಮ ಸೇವೆ ಸಲ್ಲಿಸಿದವರನ್ನು ಟಿಪ್ಪು ಹೆಸರಿನಲ್ಲಿ ಸನ್ಮಾನಿಸಬೇಕು. ನಗರಗಳಲ್ಲಿ ಯಾವುದಾದರೂ ಒಂದು ಮುಖ್ಯ ರಸ್ತೆ ಹಾಗೂ ಒಂದು ವೃತ್ತಕ್ಕೆ ಟಿಪ್ಪು ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮೀರ್ ಅಹಮದ್, ವೆಂಕಟೇಶ್ ಇತರರು ಅದ್ದರು.