ಬರ ಸಮಸ್ಯೆ: ಸೌಜನ್ಯಕ್ಕೂ ಆಲಿಸದ ಕೃಷಿ ಸಚಿವ...
ಕ.ಪ್ರ. ವಾರ್ತೆ ಅರಸೀಕೆರೆ ಅ.28
ತಾಲೂಕಿನಲ್ಲಿ ಸತತ ಬರಗಾಲ ಮಳೆ ಅಭಾವದಿಂದ ಅಂತರ್ಜಲ ಕುಸಿದು ರೈತರ ಸಂಕಷ್ಟದ ಬಗ್ಗೆ ತಿಳಿಯುವ ಸೌಜನ್ಯ ತೋರದ ಕೃಷಿ ಸಚಿವ ಕೃಷ್ಣ ಬೈರೇಗೌಡರ ನಡವಳಿಕೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಇಲ್ಲಿ ನಡೆಯಿತು.
ಶಿವಮೊಗ್ಗದಿಂದ ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರಿಗೆ ಸುದ್ದಿಗಾರರು ತಾಲೂಕಿನಲ್ಲಿ ಉಂಟಾಗಿರುವ ಭೀಕರ ಬರದ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಸಿದ್ಧತೆ ನಡೆಸಿಕೊಂಡಿದ್ದರೆ, ಇತ್ತ ಊಟ ಮುಗಿಸಿದ ಕೃಷಿ ಸಚಿವರು ತಾವು ಸುದ್ದಿಗೋಷ್ಠಿ ಕರೆದಿಲ್ಲ. ಅದರ ಅನಿವಾರ್ಯತೆಯೂ ತಮಗಿಲ್ಲ, ಮುಂದೆ ನೋಡೋಣ ಎಂದಷ್ಟೇ ಹೇಳಿ ಹೊರಡಲು ಅನುವಾದರು.
ಆದರೆ ಹೋಗಲು ಅವಕಾಶ ನೀಡದ ಸುದ್ದಿಗಾರರು ತಾಲೂಕಿನಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 7 ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ಸುಳಿಬಿದ್ದು ಸಂಪೂರ್ಣ ನಾಶ ಹೊಂದಿವೆ. ತಾಲೂಕಿನ ನೂರಾರು ಕೆರೆಗಳು ನೀರಿಲ್ಲದೆ ಬಣಗುಡುವ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಸರಿಯೇ ಎಂದು ಪ್ರಶ್ನೆಗಳ ಸುರಿಮಳೆ ಗೈದರು.
ಆದರೂ ಕಿವಿಗೊಡದ ಸಚಿವರು ಯಾವುದೇ ಉತ್ತರ ನೀಡಲಿಲ್ಲ. ಬದಲಾಗಿ ತಾವು ಇದೀಗ ಶಿವಮೊಗ್ಗ ಜಿಲ್ಲಾ ಪ್ರವಾಸ ಮುಗಿಸಿದ್ದು ಸಾಕಷ್ಟು ಬಳಲಿದ್ದೇನೆ. ಮಾತನಾಡುವ ಸಮಯ ಇದಲ್ಲವೆಂದು ಸಚಿವರು ಬೇಜವಾಬ್ದಾರಿಯಿಂದ ವರ್ತಿಸಿದರು.
ಸರಳ ಸಜ್ಜನಿಕೆ, ಪ್ರಾಮಾಣಿಕತೆ, ನೇರನುಡಿಗೆ, ನಡೆಗೆ ಹೆಸರಾಗಿದ್ದ ಮಾಜಿ ಮಂತ್ರಿ ದಿ. ಸಿ ಬೈರೇಗೌಡರ ರಾಜಕಾರಣದ ನೆರಳಲ್ಲಿ ಬೆಳೆದು ಬಂದಿರುವ ಕೃಷ್ಣ ಬೈರೇಗೌಡರ ವರ್ತನೆ ಸಹಜವಾಗಿಯೇ ತದ್ವಿವಿರುದ್ಧವಾಗಿದ್ದು ಕಂಡುಬಂದಿತು. ಮಂತ್ರಿಗಳ ನಡವಳಿಕೆಯಿಂದ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಗಲಿಬಿಲಿಗೊಂಡರು.