ಯಾವುದೇ ಕಲಿಕೆ ತಪಸ್ಸು ಇದ್ದಂತೆ: ಪ್ರೊ. ಕೃಷ್ಣೇಗೌಡ
ಹಾಸನ: ಕಲಿಕೆ ಎನ್ನುವುದು ಒಂದು ತಪಸ್ಸು. ಓದುವ ಶಿಸ್ತು, ಭಾಷೆಯ ಮೇಲಿನ ಪ್ರೀತಿ, ಕಲಿಯುವ ಆತ್ಮವಿಶ್ವಾಸವಿದ್ದಲ್ಲಿ ಯಾವ ಭಾಷೆಯೂ ಕಷ್ಟವಾಗದು. ಇಂಗ್ಲಿಷ್ ಸಹ ಇದಕ್ಕೆ ಹೊರತಾಗಿಲ್ಲ ಎಂದು ಹಾಸನದ ಗೃಹವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಸಹಪ್ರಾಧ್ಯಾಪಕ ಪ್ರೊ.ಕೆ.ಟಿ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ್ದ ಇಂಗ್ಲಿಷ್ ಅಗತ್ಯವೇ ಹೊರತು ಅನಿವಾರ್ಯವಲ್ಲ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅವರು ಮಾತನಾಡಿದರು.
ಇಂಗ್ಲಿಷ್ ಜಾಗತಿಕ ಭಾಷೆ. ನಮ್ಮ ಆಯ್ಕೆಯನ್ನು ಮೀರಿ ಜಾಗತೀಕರಣ ನಮ್ಮನ್ನು ಆವರಿಸಿಕೊಂಡಂತೆ ಇಂಗ್ಲಿಷ್ ಭಾಷೆಯೂ ನಮ್ಮನ್ನು ಆವರಿಸಿಕೊಂಡಿದೆ. ತಂತ್ರಜ್ಞಾನ ಯುಗದ ಎಲ್ಲ ಸೌಲಭ್ಯಗಳಿಗೂ ಸುಲಭವಾಗಿ ಹೊಂದಿಕೊಂಡಿರುವ ನಾವು ಇಂಗ್ಲಿಷ್ನ್ನು ಕಲಿಕೆಯ ದೃಷ್ಟಿಯಿಂದ ಕಷ್ಟ ಎಂದು ದೂರವಿಡುವುದು ಸಮರ್ಥ್ಥನೀಯವಾಗಲಾರದು. ವೈಜ್ಞಾನಿಕ ಹಾಗೂ ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಭಾರತೀಯ ಭಾಷೆಗಳಿಗಿಂತ ಇಂಗ್ಲಿಷ್ ಕಲಿಕೆ ಕಷ್ಟವೇನಲ್ಲ. ಅದು ಕಾಗುಣಿತ ಇಲ್ಲದ ಭಾಷೆ. ಶಿಕ್ಷಣ ಹಾಗೂ ಉದ್ಯೋಗದ ಸಲುವಾಗಿ ಇಂಗ್ಲಿಷ್ ಇಂದು ಅನಿವಾರ್ಯವೂ ಆಗಿದೆ ಅಗತ್ಯವೂ ಹೌದು ಎಂದು ಹೇಳಿದರು.
ಇಂಗ್ಲಿಷನ್ನು ಕಲಿಯುವುದೆಂದರೆ ಕನ್ನಡವನ್ನಾಗಲಿ, ಕನ್ನಡದ ಅಭಿಮಾನವನ್ನಾಗಲಿ ಬಿಡಬೇಕು ಎಂದಲ್ಲ. ಹಾಗೆ ನೋಡಿದರೆ ಹೆಚ್ಚು ಭಾಷೆಗಳನ್ನು ಕಲಿತಂತೆಲ್ಲಾ ನಮ್ಮ ಜ್ಞಾನ ವಿಕಾಸವಾಗುತ್ತದೆ. ಭಾಷೆ ಸುಲಲಿತವಾಗುತ್ತದೆ. ಆದರೆ ಇಂಗ್ಲಿಷ್ ಬಗೆಗಿನ ಪೂರ್ವಾಗ್ರಹ ಭಾವನೆ, ನಿರ್ಲಕ್ಷ್ಯತೆ ಹಾಗೂ ಅಸಡ್ಡೆತನದಿಂದಾಗಿ ಇಂಗ್ಲಿಷ್ ಕಲಿಕೆ ಕಷ್ಟವಾಗಿದೆ ಎಂದರು.
ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಕಬ್ಬಿಣದ ಕಡಲೆ ಹಾಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಸವಾಲನ್ನು ಸ್ವೀಕರಿಸಿ ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಇಂಗ್ಲಿಷ್ ಕಲಿತು ಜಾಗತಿಕ ಸ್ಪರ್ಧೆಗೆ ಸಿದ್ಧರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ್ ಮಾತನಾಡಿ, ಇಂಗ್ಲಿಷ್ ನಾವು ನಿರಾಕರಿಸುವಂತಹ ಭಾಷೆಯಲ್ಲ. ಕನ್ನಡದ ಹಾಗೆಯೇ ಸಮೃದ್ಧ ಸಾಹಿತ್ಯವಿರುವ ಭಾಷೆ. ಆದರೆ ಅದನ್ನು ಶಿಕ್ಷಣದಲ್ಲಿ ಕಡ್ಡಾಯ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅದರ ಬಗೆಗೆ ಅಸಡ್ಡೆ, ನಿರ್ಲಕ್ಷ್ಯ ಹಾಗೂ ಭಯ ಉಂಟಾಗಿದೆ.
ಪದವಿಯಲ್ಲಿ ಇಂಗ್ಲಿಷ್ ಪತ್ರಿಕೆಯಲ್ಲಿ ಉತ್ತೀರ್ಣರಾಗಲು ತಿಣುಕಾಡಿದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಮುಂದೆ ಇಂಗ್ಲಿಷಿನ ಗ್ರಂಥಗಳನ್ನು ಲೀಲಾಜಾಲವಾಗಿ ಕನ್ನಡಕ್ಕೆ ಅನುವಾದಿಸುವ ಜ್ಞಾನ ಪಡೆದುಕೊಂಡಿದ್ದು ನಮ್ಮ ಕಣ್ಣ ಮುಂದೆ ಇದೆ. ಇದು ಕೇವಲ ಭಾಷೆಯ ಪ್ರಶ್ನೆ ಮಾತ್ರ ಅಲ್ಲ. ಸವಾಲಿನ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ. ಅದ್ದರಿಂದ ವಿದ್ಯಾರ್ಥಿಗಳು ಆತಂಕವನ್ನು ಬದಿಗಿರಿಸಿ, ಸವಾಲನ್ನು ಸ್ವೀಕರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.