ಸೌಜನ್ಯಾ ಕೊಲೆಗಾರರನ್ನು ಬಂಧಿಸಿ
ಕನ್ನಡಪ್ರಭ ವಾರ್ತೆ ಹಾಸನ ಅ. 28
ಕಾಲೇಜು ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿಸುವಂತೆ ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದ ರು.
ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಕೂಡಲೇ ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಮೇಲೆ ಧರ್ಮಸ್ಥಳದಲ್ಲಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ನಡೆದು ಒಂದು ವರ್ಷ ಕಳೆದರೂ, ಆಕೆಗೆ ನ್ಯಾಯ ಸಿಗದಿರುವುದು ಅತ್ಯಂತ ಖಂಡನೀಯ ಎಂದು ಆರೋಪಿಸಿದರು.
ಪೊಲೀಸರು ಸೂಕ್ತ ತನಿಖೆ ನಡೆಸಿ, ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗೂ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನೈಜ ಆಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿದ್ದಾರೆ. ರಾಜ್ಯ ಪೊಲೀಸರು ಅಥವಾ ಸಿಒಡಿಯಿಂದಾಗಲೀ ತನಿಖೆ ಮಾಡಿ ಪ್ರಕರಣದ ಹಿಂದಿರುವ ನೈಜ ವ್ಯಕ್ತಿಗಳನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸರ್ಕಾರ ಕೂಡಲೇ ಸಿಬಿಐಗೆ ವಹಿಸಿಕೊಡಬೇಕು ಎಂದು ಪಟ್ಟು ಹಿಡಿದರು. ಇದು ಪಾಳೆಗಾರಿಕೆ ವಿರುದ್ಧದ ಹೋರಾಟವಾಗಿದೆ. ಹಿಂದೆ ಧರ್ಮಸ್ಥಳದಲ್ಲಿ ಪದ್ಮಲತಾಳ ಮೇಲೆ ಅತ್ಯಾಚಾರವಾಗಿ ಕೊಲೆಯಾಗಿತ್ತು. ಇದೀಗ ಅದೇ ಧರ್ಮಸ್ಥಳದಲ್ಲಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆಯಾಗಿದೆ. ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದ ಪ್ರತಿಭಟನಾನಿರತರು, ಈ ಹೋರಾಟ ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಇದು ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದೆ. ಪೊಲೀಸರು ಸೌಜನ್ಯಾ ಕೊಲೆಗಾರರನ್ನು ಬಂಧಿಸುವ ಬದಲು ಇದರ ವಿರುದ್ಧ ಧ್ವನಿ ಎತ್ತುವವರನ್ನು ಧಮನಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೊಂದವರ ಪರವಾಗಿ ನಿಲ್ಲಬೇಕಾದ ಸರ್ಕಾರ ಶೋಷಕರ ಪರ ನಿಂತಿದೆ. ಸಚಿವ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಸಂಸದ ನಳಿನ್ಕುಮಾರ್ ಕಟೀಲ್, ಜನಾರ್ದನ ಪೂಜಾರಿಯವರು ನ್ಯಾಯ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆಯೊಡ್ಡುತ್ತಿದ್ದಾರೆ. ಸೌಜನ್ಯಾಳ ಕೊಲೆಯಾದಾಗ ಕ್ರಮ ಕೈಗೊಳ್ಳಲು ಇವರೇಕೆ ಮುಂದಾಗಲಿಲ್ಲ. ಧರ್ಮದ ಮುಖವಾಡ ಹಾಕಿಕೊಂಡವರು ಧರ್ಮವನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಜನ ಎಚ್ಚರಗೊಳ್ಳಬೇಕಾದ ಅಗತ್ಯವಿದೆ. ಸೌಜನ್ಯಾ ಪ್ರಕರಣದಲ್ಲಿ ಧ್ವನಿ ಎತ್ತಿದವರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್, ಬಿಜೆಪಿಗರು ಒಂದಾಗಿದ್ದರು. ಅವರಿಗೆ ಸೌಜನ್ಯಾಳ ನೋವಿಗಿಂತಲೂ ದೊಡ್ಡವರಿಗಾಗಿರುವ ಅಪಮಾನವೇ ಮುಖ್ಯ ವಿಷಯವಾಗಿದೆ ಎಂದು ದೂರಿದರು.
ಸಚಿವ ವಿನಯ ಕುಮಾರ್ ಸೊರಕೆಯವರು ಬಹಿರಂಗವಾಗಿಯೇ ಸರ್ಕಾರ ಯಾರ ಪರ ಇದೆ ಎಂದು ಹೇಳಿಕೊಂಡಿದ್ದಾರೆ. ಸಮಾಜವಾದಿ ಹಿನ್ನೆಲೆಯಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಅರ್ಥ್ಥಮಾಡಿಕೊಂಡು ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಎಸ್ಎಫ್ಐನ ಪೃಥ್ವಿ, ಮಂಜುನಾಥ್, ಗಿರೀಶ್, ಶಾವಲ್ ಅಮೀದ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.