ಅಧಿಕಾರ ವಿಕೇಂದ್ರೀಕರಣದ ಶಕ್ತಿ ಮೊಟಕು ಪ್ರಯತ್ನ ಜಿಪಂ ಸದಸ್ಯ ದೇವೇಗೌಡ ಆಕ್ಷೇಪ
ಹೊಳೆನರಸೀಪುರ: ಇತ್ತೀಚಿನ ದಿನಗಳಲ್ಲಿ ಅಧಿಕಾರ ವಿಕೇಂದ್ರೀಕರಣದ ಶಕ್ತಿ ಹಾಗೂ ಅದರ ಅರ್ಥವನ್ನೇ ಮೊಟಕುಗೊಳಿಸುವ ಪ್ರಯತ್ನಗಳನ್ನು ಸರ್ಕಾರಗಳು ಮಾಡುತ್ತಿವೆ ಎಂದು ಜಿಪಂ ಸದಸ್ಯ ಎಚ್.ಎನ್.ದೇವೇಗೌಡ(ಪಾಪಣ್ಣಿ) ಆಕ್ಷೇಪಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯ್ತಿಯ ಚುನಾಯಿತ ಮಹಿಳಾ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭವಿಷ್ಯದ ದಿನಗಳಲ್ಲಿ ಪಂಚಾಯತ್ರಾಜ್ ವ್ಯವಸ್ಥೆ ಹೆಚ್ಚು ಬಲಿಷ್ಠಗೊಳ್ಳಬೇಕಾದಲ್ಲಿ ವಿದ್ಯಾವಂತ ಮಹಿಳೆಯರು ಹೆಚ್ಚು ಹೆಚ್ಚಾಗಿ ರಾಜಕಾರಕ್ಕೆ ಪ್ರವೇಶಿಸಬೇಕಾದ ಅವಶ್ಯಕತೆ ಇದೆ ಎಂದರು.
ರಾಜಕಾರಣದ ಪ್ರತಿ ಹಂತದಲ್ಲಿಯೂ ಮಹಿಳೆಯರು ಎಲ್ಲರಂತೆಯೇ ಶೈಕ್ಷಣಿಕ ಹಾಗೂ ಬೌದ್ಧಿಕ ಜ್ಞಾನವನ್ನು ಪಡೆದುಕೊಂಡು ಪ್ರಬುದ್ಧತೆಯನ್ನು ಹೊಂದುವಂತೆ ಕಾರ್ಯಾಗಾರದಲ್ಲಿ ಹಾಜರಿದ್ದ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಚುನಾಯಿತ ಮಹಿಳಾ ಸದಸ್ಯರುಗಳಲ್ಲಿನ ವಿದ್ಯೆ ಹಾಗೂ ಅರಿವಿನ ಕೊರತೆಯಿಂದಾಗಿಯೇ ಸರ್ಕಾರದ ಸವಲತ್ತುಗಳನ್ನು ಅಧಿಕಾರಿ ವರ್ಗದಿಂದ ಸಮರ್ಪಕವಾಗಿ ತಮ್ಮನ್ನು ಚುನಾಯಿಸಿದ ಜನರಿಗೆ ಸೂಕ್ತವಾಗಿ ತಲುಪಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ಎಚ್.ಎನ್.ದೇವೇಗೌಡ ವಿಷಾದಿಸಿದರು.
ಯಾವುದೇ ಕ್ಷೇತ್ರವಿರಲಿ ಪರಿಪೂರ್ಣ ತಿಳಿವಳಿಕೆ ಹೊಂದಿದವರು ವಿರಳ. ಆದ್ದರಿಂದಲೇ ಪ್ರಮುಖವಾಗಿ ಆಡಳಿತಾತ್ಮಕವಾಗಿ ಗ್ರಾಪಂ ಚುನಾಯಿತ ಸದಸ್ಯರುಗಳಿಗೆ ಈ ರೀತಿಯ ಆಡಳಿತಾತ್ಮಕ ತರಬೇತಿಯ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳ ಚಿಂತನೆ ಹಾಗೂ ಕಾಳಜಿಯು ಶ್ಲಾಘನೀಯ ಎಂದರು.
ಪಂಚಾಯತ್ರಾಜ್ ವ್ಯವಸ್ಥೆಯನ್ನು 1985ರಲ್ಲಿ ಅಂದಿನ ಜನತಾಪಕ್ಷ ಸರ್ಕಾರ ಜಾರಿಗೆ ತಂದು, ಅಧಿಕಾರ ವಿಕೇಂದ್ರೀಕರಣದ ಹೆಬ್ಬಾಗಿಲನ್ನು ತೆರೆದು ಎಲ್ಲರಿಗೂ ಸಮಾನ ಅವಕಾಶದ ದಾರಿಯನ್ನು ತೋರಿದ ಕೀರ್ತಿ ಜನತಾಪಕ್ಷಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಎಂ.ಎನ್.ಜೈಪ್ರಕಾಶ್ ಮಾತನಾಡಿ, ಹಕ್ಕನ್ನು ಚಲಾಯಿಸುವ, ಕರ್ತವ್ಯ ನಿಭಾಯಿಸುವ ಕನಿಷ್ಠ ಜ್ಞಾನ ಹೊಂದಲು ಜನಪ್ರತಿನಿಧಿಗಳಾಗುವ ಮಹಿಳೆಯರು ಮೊದಲು ವಿದ್ಯಾವಂತರಾಗಿರ ಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಮಾತನಾಡಿ, ಮಹಿಳಾ ಸಬಲೀಕರಣ, ಆಡಳಿತದಲ್ಲಿ ಮಹಿಳೆಯ ಪಾತ್ರವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ, ಆಡಳಿತದಲ್ಲಿ ಮಹಿಳೆಯು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಯಾಗುವಂತೆ ಈ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಹಾಸನದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಪ್ರೊ.ಎನ್.ಎಂ.ಲಕ್ಷ್ಮಣ್ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಆಡಳಿತಾತ್ಮಕ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಪಂ ಸದಸ್ಯ ಎಚ್.ಎನ್.ದೇವೇಗೌಡ(ಪಾಪಣ್ಣಿ) ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ನಯನತಾರಾಮಣಿ ರಚಿಸಿರುವ ಆಂಗ್ಲಭಾಷೆಯ ಕಲಿಕಾ ವಿಧಾನಗಳಲ್ಲಿನ ಲೋಪಗಳ ಕುರಿತಾದ ಮಾಹಿತಿ ಫಲಕವನ್ನು ಅನಾವರಣಗೊಳಿಸಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಂಚಾಲಕ ಪಿ.ಆರ್.ಶಾಂತ ನೇತೃತ್ವ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್.ಸಿ.ಸಿ ಅಧಿಕಾರಿ ಎನ್.ವಿ.ಶ್ರೀನಿವಾಸ್ ಇದ್ದರು.