ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ
ಹಾಸನ: ಉತ್ತಮ ಹವ್ಯಾಸ ಮತ್ತು ಆದರ್ಶಗಳನ್ನು ಅಭ್ಯಸಿಸಿ ಅವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಾಗೂ ತಮ್ಮ ದೈನಂದಿನ ಬದುಕಿನಲ್ಲಿ ಸಂಭವಿಸುವ ವಾಸ್ತವ ಅಂಶಗಳನ್ನು ಸಕರಾತ್ಮಕವಾಗಿ ಸ್ವೀಕರಿಸಲು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿದಲ್ಲಿ ಪ್ರತಿಯೊಬ್ಬರ ನೆಮ್ಮದಿ ಜೀವನಕ್ಕೆ ನಾಂದಿಯಾಗಬಹುದು ಎಂದು ಮೈಸೂರಿನ ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಮತ್ತು ಆವಿಷ್ಕಾರ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥರೂ ಹಾಗೂ ತರಬೇತುದಾರ ಡಾ. ಎಂ.ಪಿ. ವರ್ಷ ಅಭಿಪ್ರಾಯಪಟ್ಟರು. ನಗರದ ಬಿ. ಕಾಟೀಹಳ್ಳಿಯಲ್ಲಿರುವ ಸೇವಾ ಸಂಸ್ಥೆಯಲ್ಲಿ ಚಿಕ್ಕಮಗಳೂರು ಸಿಎಮ್ಎಸ್ಎಸ್ಎಸ್ ನವರು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಮಾಜ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಎರಡು ದಿನದ ಜೀವನ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಈಗಿನ ಜನರ ಆಧುನಿಕ ಬದುಕು ಯಾಂತ್ರಿಕವಾಗಿದ್ದು ಜೀವನದ ಮೌಲ್ಯಗಳನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಮನುಷ್ಯ ದೈಹಿಕವಾಗಿ ಬವಣೆ ಪಡುವುದಕ್ಕಿಂತ ಮಾನಸಿಕವಾಗಿ ತೊಂದರೆಗಳನ್ನು ಅನುಭವಿಸುತ್ತಾನೆ. ಈ ನಿಟ್ಟಿನಲ್ಲಿ ತಮ್ಮ ನಕಾರಾತ್ಮಕ ಭಾವನೆಗಳನ್ನು ಹತೋಟಿಯಲ್ಲಿಟ್ಟು ಆರೋಗ್ಯಕರ ಜೀವನ ಕೌಶಲ್ಯಗಳನ್ನು ಅಳವಡಿಸಿ ಹೃದಯ ವ್ಯೆಶಾಲ್ಯತೆಯಿಂದ ಜೀವಿಸುವುದು ಅತೀ ಅವಶ್ಯವಾಗಿದೆ ಎಂದರು. ಕಾರ್ಯಾಗಾರದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಹಾಗೂ ಅವು ಜೀವನದ ಮೇಲೆ ಬೀರುವ ಪ್ರಭಾವ ಹಾಗೂ ಉಂಟುಮಾಡುವ ಪರಿಣಾಮಗಳು ಸಕಾರಾತ್ಮಕವಾಗಿ ಅಭ್ಯಸಿಸುವ ಹವ್ಯಾಸಗಳು, ಮಾನಸಿಕವಾಗಿ ದೃಢವಾಗಿರಲು ಅನುಸರಿಸಬೇಕಾದ ಸಕಾರಾತ್ಮಕ ನಿಲುವು, ಉತ್ತಮ ಸಂವಹನ ಕೌಶಲ್ಯಗಳು, ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಗುರಿ ಸಾಧನೆಗೆ ಅಳವಡಿಸಬೇಕಾದ ಕ್ರಮಗಳು, ಕಡಿಮೆ ಆದಾಯದಲ್ಲಿ ಉಳಿತಾಯ ಮಾಡುವ ರೀತಿ, ಸಾಮಾಜಿಕ ಸಂಬಂಧಗಳನ್ನು ಬೆಳೆಸುವುದು ಹಾಗೂ ವೃದ್ಧಿಸುವ ಕಲೆ ಮುಂತಾದ ವಿಷಯಗಳನ್ನು ಗುಂಪು ಚರ್ಚೆ, ನ್ಯೆಜ ಘಟನೆ, ಉಪನ್ಯಾಸವನ್ನು ಎಲಲ್ಸಿ ಡಿ ಮೂಲಕ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ 65 ಸಮಾಜ ಕಾರ್ಯಕರ್ತರು ಭಾಗವಹಿಸಿದ್ದರು. ಅಪ್ಪು ನಾರಾಯಣ ಸ್ವಾಗತಿಸಿದರು. ಸತೀಶ್ ವಂದಿಸಿದರು.
ವಿಸರ್ಜನೋತ್ಸವ
ಅರಸೀಕೆರೆ: ಜಾವಗಲ್ ಹೋಬಳಿ ಕರುಗುಂದ ಗ್ರಾಮದ ಗೌರಮ್ಮನನ್ನು ಅಸಂಖ್ಯಾ ಭಕ್ತರ ಸಡಗರ ಸಂಭ್ರಮದ ನಡುವೆ ಗ್ರಾಮದ ಕಲ್ಯಾಣಿಯಲ್ಲಿ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು. ಕಳೆದ 48 ದಿನಗಳಿಂದ ಪ್ರತಿಷ್ಠಾಪಿಸಿದ ಗೌರಮ್ಮನಿಗೆ ನಿತ್ಯ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ವಿಸರ್ಜನಾ ಅಂಗವಾಗಿ ಗ್ರಾಮದ ಬೀದಿಗಳು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಮನೆ ಮನೆಗೆ ತೆರಳಿ ಮಡಿಲು ತುಂಬಿಸಿಕೊಳ್ಳುವ ಕಾರ್ಯಕ್ರಮವೂ ನಡೆಯಿತು. ಅಮ್ಮನವರ ಸ್ವಾಗತಕ್ಕಾಗಿ ಬೀದಿ ಬೀದಿಗಳಲ್ಲಿಯು ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು.