ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಳ್ಳುಪೇಟೆಯಲ್ಲಿ ನಾಗಬನ ಪ್ರತಿಷ್ಠಾಪನೆ

Rashmi Kasaragodu
Updated On : 29 Oct 2013, 11:22 am

ಬಾಳ್ಳುಪೇಟೆ (ಸಕಲೇಶಪುರ ತಾ.): ಇಲ್ಲಿನ ಬಸವೇಶ್ವರ ನಗರ ಬಡಾವಣೆಯಲ್ಲಿ ನಾಗಬನ ಪ್ರತಿಷ್ಠಾಪನಾ ಸಮಾರಂಭ ಶ್ರದ್ಧಾಭಕ್ತಿಯಿಂದ ನೆರವೇರಿತು. ಬನವಾಸೆ ಗ್ರಾಮದ ಶಾಂತಮಲ್ಲೇಶ್ವರ ಸ್ವಾಮಿ ದೇವಾಲಯದಿಂದ 300 ಮಹಿಳೆಯರು ವಾದ್ಯಗೋಷ್ಠಿಯೊಂದಿಗೆ ಕಳಶಗಳನ್ನು ಹೊತ್ತು ನಾಗಬನದವರೆಗೂ ಮೆರವಣಿಗೆ ನಡೆಸಿದರು.
ಪಾವಂಜೆ ಮಾಧವರಾಯರ ನೇತೃತ್ವದ ಅರ್ಚಕರ ತಂಡ ಜಲವಾಸದಲ್ಲಿದ್ದ ನಾಗದೇವತೆಯನ್ನು ಧಾರ್ಮಿಕ ವಿಧಿ ವಿಧಾನದಂತೆ ಪೂಜಿಸಿ ಮೆರವಣಿಗೆಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಯಿತು.
ನಂತರ ನಿಯಮಗಳ ಪ್ರಕಾರ ಮಂತ್ರ ಪಠಿಸಿ, ನಾಗದೇವತೆ ರಂಗೋಲಿ ರಚಿಸಿ, ಹೋಮ ಹವನ ನಡೆಸಿ   ನಾಗದೇವತಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಹಿನ್ನೆಲೆ: ಬಾಳ್ಳುಪೇಟೆಯ ಗ್ರಾಮದೇವತೆ ದೇವೀರಮ್ಮ ದೇವಸ್ಥಾನವನ್ನು ರಾಷ್ಟ್ರೀಯ ಹೆದ್ದಾರಿ 48ರ ವಿಸ್ತರಣಾ ಕಾಮಗಾರಿ ಆರಂಭವಾದ ನಂತರ ಸ್ಥಳಾಂತರಿಸ ಬೇಕಾಗುವುದರಿಂದ ಬದಲಿ ಸ್ಥಳ ಗುರುತಿಸುವುದಕ್ಕೆ ಗ್ರಾಮದ ಪ್ರಮುಖರು ಅಷ್ಠಮಂಗಲ ಪ್ರಶ್ನೆ ಕೇಳಿದ್ದರು. ಆ ವೇಳೆ ಗ್ರಾಮದಲ್ಲಿ ಈ ಹಿಂದೆ ಇದ್ದ ನಾಗಬನಕ್ಕೆ ಪೂಜೆ ಸಲ್ಲಿಕೆಯಾಗುತ್ತಿಲ್ಲ. ಆದ್ದರಿಂದ ನಾಗಬನದಲ್ಲಿ ನಾಗದೇವತೆ ಪ್ರತಿಷ್ಠಾಪನೆ ನೆರವೇರಿಸಬೇಕು ಎಂದು ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಬಸವೇಶ್ವರ ನಗರದಲ್ಲಿರುವ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ಅವರಿಗೆ ಸೇರಿದ ಜಮೀನಿನಲ್ಲಿ ಸುಮಾರು 400 ವರ್ಷ ಹಳೆಯದಾದ ಅರಳೀಮರದ ಬಳಿ ಸರ್ಪ ಸಂಚಾರವಿರುವುದು ಗಮನಕ್ಕೆ ಬಂದಿತು. ಅಷ್ಠಮಂಗಲ ಪ್ರಶ್ನೆ ಹಾಕಿದ ಗುರುಗಳೂ ಅದೇ ಸ್ಥಳ ಹಿಂದೆ ನಾಗಬನವಾಗಿತ್ತು ಎನ್ನುವುದನ್ನು ದೃಢಪಡಿಸಿದರು. ಈ ಸಂಬಂಧ ಗ್ರಾಮಸ್ಥರು ಒಟ್ಟಾಗಿ ಸೇರಿ ಮಲೆನಾಡು ಭಾಗಕ್ಕೆ ಹೊಸದಾದ ನಾಗ ಪ್ರತಿಷ್ಠೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ನಾಗದೇವತೆ ಪ್ರತಿಷ್ಠೆ ನಂತರ ಸಾವಿರಾರು ಮಂದಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಎಲ್ಲಿಯೂ ನಾಗಬನ ಪ್ರತಿಷ್ಠಾಪನೆಯಾಗಿಲ್ಲ. ಇನ್ನು ಮುಂದೆ ಯಾವುದೇ ನಾಗದೋಷದ ಪರಿಹಾರಕ್ಕೆ ಇಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳನ್ವಯ ಪೂಜೆ ನೆರವೇರಿಸಬಹುದು. ಅರ್ಚಕರು ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗ ಶಾಂತಿಯಂತಹ ಪೂಜೆಗಳನ್ನು ನಡೆಸಲಿದ್ದಾರೆ ಎಂದು ಬಿ.ಎ.ಜಗನ್ನಾಥ್ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement