ಸಂಪತ್ತ್ತು ಕೂಡಿಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ
ಹೊಳೆನರಸೀಪುರ: ಅಪ್ಪ-ಅಮ್ಮಂದಿರು ಮಕ್ಕಳಿಗೆ ಆಸ್ತಿ ಅಂತಸ್ತು ಕೂಡಿಡುವ ಬದಲು ಮಕ್ಕಳನ್ನೆ ಒಂದು ಆಸ್ತಿಯನ್ನಾಗಿ ಮಾಡುವಲ್ಲಿ ಪೋಷಕರು ಕಾರ್ಯ ಪ್ರವರ್ತರಾಗಬೇಕೆಂದು ಜೆಡಿಎಸ್ ಮುಖಂಡ ಹಾಗೂ ಬೆಂಗಳೂರಿನ ಸಾಯಿಗೋಲ್ಡ್ ಪ್ಯಾಲೇಸ್ನ ಚೇರ್ಮನ್ ಶರವಣ ಹೇಳಿದರು.
ಪಟ್ಟಣದ ಶ್ರೀವಾಸವಾಂಬ ಕೋ ಆಪರೇಟಿವ್ ಬ್ಯಾಂಕಿನನ ಶತಮಾನೋತ್ಸವ ಸಮಾರಂಭದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು. ಹಣವೊಂದು ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ನಂಬಿಕೆ ಸರಿಯಲ್ಲ. ಹಣವಿಲ್ಲದಿದ್ದರೂ ಆತನಲ್ಲಿನ ಒಳ್ಳೆಯ ಗುಣಗಳು ಸಮಾಜದ ಉನ್ನತ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯ ಎಂಬುದಕ್ಕೆ ತಮ್ಮ ಜೀವನವೇ ಉದಾಹರಣೆ ಎಂದು ತಿಳಿಸಿದರು.
ತಾವು ಮಧ್ಯಮ ವರ್ಗದಲ್ಲಿ ಜನಿಸಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಆಗಮಿಸಿ ಆಲ್ಲಿನ ಒಂದು ಚಿನ್ನಬೆಳ್ಳಿ ಅಂಗಡಿಯಲ್ಲಿ ಕೇವಲ ಮೂನ್ನೂರು ರು. ವೇತನ ಪಡೆದೆ. ದಿನಕಳೆದಂತೆ ನನ್ನಲ್ಲಿನ ಆತ್ಮಸ್ಥೈರ್ಯದಿಂದ ಹಂತ ಹಂತವಾಗಿ ಮೇಲೇರಿ ಇಂದು ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತೆಂದು ಉದಹರಿಸಿದರು.
ತುಮಕೂರು ಆರ್ಯವೈಶ್ಯ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶ್ರೀಧರಮೂರ್ತಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕಾಗಿ ದುಡಿದ ಹಿರಿಯರನ್ನು ನೆನಪಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಅವರು ಹಾಕಿ ಕೊಟ್ಟ ಮಾರ್ಗದರ್ಶನ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದಾರಿಯಾಗಲಿದೆ ಎಂದರು.
ಇದೇ ವೇಳೆ ವಿವಿಧ ಪ್ರತಿಭೆಗಳನ್ನು ಗೌರವಿಸಿದ ಅಂತಾರಾಷ್ಟ್ರೀಯ ವಾಸವಿಕ್ಲಬ್ ವಕ್ತಾರ ಉದಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಅವಶ್ಯವಾಗಿ ಅನುಸರಿಸಬೇಕಾದ ಬಗ್ಗೆ ಕಿವಿ ಮಾತು ಹೇಳಿದರು.
ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೌತಮ್, ಎನ್.ಜಿ.ಮುಕುಂದ್ ಇತರರು ಇದ್ದರು. ಸಮಾರಂಭದ ನಂತರ ಆರ್ಯಭಟ ಪ್ರಶಸ್ತಿ ವಿಜೇತೆ, ಅಂತರಾಷ್ಟ್ರೀಯ ಕಲಾವಿದೆ ರಮ್ಯ ಸೂರಜ್ ನಡೆಸಿಕೊಟ್ಟ 'ಅವತರಿಸಿದಳು ವಾಸವಿ' ಎಂಬ ನೃತ್ಯರೂಪಕ ಎಲ್ಲರ ಮನಸೂರೆಗೊಂಡಿತು.