ಇಂದು ಕಲಾಶ್ರೀ ಪ್ರಶಸ್ತಿಗಾಗಿ ಸ್ಪರ್ಧಾ ಶಿಬಿರ
ಹಾಸನ: ಕಲಾಶ್ರೀ ಪ್ರಶಸ್ತಿ ಆಯ್ಕೆಗಾಗಿ ಅ. 31ರಂದು ಅರಕಲಗೂಡು ಮತ್ತು ಬೇಲೂರು ತಾಲೂಕುಗಳಲ್ಲಿ ಸ್ಪರ್ಧಾ ಶಿಬಿರ ಏರ್ಪಡಿಸಲಾಗಿದೆ. ಕರ್ನಾಟಕ ಬಾಲಭವನ ಸೊಸೈಟಿ ಬೆಂಗಳೂರು ಮತ್ತು ಬೇಲೂರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ, (ತಾಲೂಕು ಬಾಲಭವನ ಸಮಿತಿ) ಆಶ್ರಯದಲ್ಲಿ 2013-14ನೇ ಸಾಲಿಗೆ ಕಲಾಶ್ರೀ ಪ್ರಶಸ್ತಿಗಾಗಿ ಆಸಕ್ತಿಯುಳ್ಳ 9 ರಿಂದ 16 ವರ್ಷದೊಳಗಿನ ಶಾಲಾ ಮಕ್ಕಳಿಗಾಗಿ ಶಿಬಿರ ನಡೆಯಲಿದೆ. ಬೇಲೂರು ಬಸ್ ನಿಲ್ದಾಣ ಎದುರು ಸರ್ಕಾರಿ ಪದವಿ ಪೂರ್ವ ಕಾಲೇಜು, ಅ. 31ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಿದೆ. ಅರಕಲಗೂಡು ತಾಲೂಕಿನ ಸ್ಪರ್ಧಾ ಶಿಬಿರ ಅದೇ ದಿನ ಬೆಳಿಗ್ಗೆ 10.30ಕ್ಕೆ ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಸ್ತ್ರೀಶಕ್ತಿ ಭವನದಲ್ಲಿ ನಡೆಯಲಿದೆ. ಸ್ಪರ್ಧೆಗಿರುವ ವಿಷಯಗಳು - ಸೃಜನಾತ್ಮಕ ಕಲೆ, ಚಿತ್ರಕಲೆ, ಕರಕುಶಲತೆ, ಜೇಡಿಮಣ್ಣಿನ ಕಲೆ. ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು. ಸೃಜನಾತ್ಮಕ ಬರವಣಿಗೆ - ಕಥೆ, ಕವನ, ಪ್ರಬಂಧ ಬರೆಯುವುದು- ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು. ಸೃಜನಾತ್ಮಕ ಪ್ರದರ್ಶನ ಕಲೆ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್ ಇತ್ಯಾದಿ ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿದೆ. ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ ನೀಡುವುದು. ಆಸಕ್ತ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಬೇಲೂರು ಹಾಗೂ ಅರಕಲಗೂಡು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಥವಾ ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು.