ಏಡ್ಸ್ ನಿಯಂತ್ರಣ, ತಡೆಗಟ್ಟುವಿಕೆ ಮಾಹಿತಿ ಕಾರ್ಯಕ್ರಮ
ಹಾಸನ: ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಯಾವುದೇ ನಕಾರಾತ್ಮಕ ವಿಷಯಗಳಿಗೆ ದಾಸರಾಗದೆ ಉತ್ತಮ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಆರೋಗ್ಯಪೂರ್ಣ ಸಮಾಜದ ನಿರ್ಮಾಪಕರಾಗಲು ಸಾಧ್ಯ ಎಂದು ಸಂತ ಜೋಸೆಫ್ ಪಪೂ ಕಾಲೇಜಿನ ಪ್ರಾಂಶುಪಾಲ ಜೆರಾಲ್ಡ್ ಪುರ್ಟಡೊ ಹೇಳಿದರು.
ನಗರದ ಸಂತ ಜೋಸೆಫ್ ವಿದ್ಯಾಸಂಸ್ಥೆಯ ಲೊಯೋಲಾ ಸಭಾಂಗಣದಲ್ಲಿ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ವತಿಯಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಡ್ಸ್ನಂತಹ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕೇವಲ ಜನ ಜಾಗೃತಿಯಿಂದ ಮಾತ್ರ ಸಾಧ್ಯ. ಯುವಜನರು ಕಾಯಿಲೆ ಬಗ್ಗೆ ತಿಳಿದು ಸಮುದಾಯದಲ್ಲಿ ಪರಿಣಾಮಕಾರಿಯಾಗಿ ಅರಿವು ನೀಡುವ ಮೂಲಕ ಎಚ್ಐವಿ ಮುಕ್ತ ಸಮಾಜ ರೂಪಿಸಲು ಮುಂದಾಗಬೇಕು ಎಂದರು. ಸೇವಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿನ್ಸಿ ಸಿಕ್ವೇರಾ ಮಾತನಾಡಿ, ವಾಸ್ತವದಲ್ಲಿ ಹೆಚ್ಚಾಗಿ ಎಚ್ಐವಿ ಸೋಂಕಿಗೆ ಮಹಿಳೆಯರು ತುತ್ತಾಗಿ ಕೌಟುಂಬಿಕ ಹಾಗೂ ಸಮುದಾಯದ ಕಳಂಕ ಮತ್ತು ತಾರತಮ್ಯ ಅನುಭವಿಸುತ್ತಿರುವುದು ಮಾತ್ರ ದುರಂತ ಎಂದು ವಿಷಾದಿಸಿದರು. ಎಚ್ಐವಿ ಹರಡುವ ವಿಧಾನ, ಲಕ್ಷಣ, ಸರಕಾರಿ ಉಚಿತ ಆರೋಗ್ಯ ಸೇವೆಗಳು, ಸೋಂಕಿನೊಂದಿಗಿನ ಸಕಾರಾತ್ಮಕ ಜೀವನ ಮತ್ತು ಸೋಂಕು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಮುಂತಾದ ವಿಷಯಗಳನ್ನು ಉಪನ್ಯಾಸ, ಗುಂಪು ಚರ್ಚೆ ಅರಿವಿನ ಚಲನ ಚಿತ್ರ ಮತ್ತು ನೈಜ ಉದಾಹರಣೆಗಳ ಮೂಲಕ ಸವಿಸ್ತಾರವಾಗಿ ವಿವರಿಸಲಾಯಿತು.
ಉಪನ್ಯಾಸಕ ಕೇಶವಕುಮಾರ್, ಶೋಭಾ, ರೂಪಾದೇವಿ, ನ್ಯಾನ್ಸಿ, ವೀಣಾ, ತಾರಾನಾಥ್, ಕಾರ್ಯಕರ್ತೆ ಪ್ರಮೀಳಾ ಹಾಗೂ ವಿದ್ಯಾರ್ಥಿಗಳು ಇದ್ದರು.