ಕಾಡಾನೆ ಹಾವಳಿ: 25 ಎಕರೆ ಬತ್ತ ನಾಶ
ಕನ್ನಡಪ್ರಭ ವಾರ್ತೆ ಆಲೂರು ಅ. 30
ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ದಾಳಿಯಿಂದ ಅಪಾರ ಬೆಳೆ ಹಾನಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಅಬ್ಬನ, ಈಡುವನಹಳ್ಳಿ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು 25 ಎಕರೆಯಲ್ಲಿ ಬೆಳೆಯಲಾಗಿದ್ದ ಬತ್ತದ ಬೆಳೆ ನಾಶಪಡಿಸಿವೆ. ರೈತ ನಾರಾಯಣಶೆಟ್ಟಿ ಎಂಬುವರಿಗೆ ಸೇರಿದ 40 ಸಾವಿರ ರು. ಮೌಲ್ಯದಷ್ಟು ಬೆಳೆ ನಾಶವಾಗಿದೆ. ಉಳಿದಂತೆ ರೈತರಾದ ವಿರೂಪಾಕ್ಷ ಅವರ 30 ಸಾವಿರ ರು, ಲಕ್ಷ್ಮೀ ಎಂಬುವರ 35 ಸಾವಿರ ರು. ಚಂದ್ರಯ್ಯ ಎಂಬುವರಿಗೆ 25 ಸಾವಿರ ರು. ಹಾಗೂ ಪುಟ್ಟರಾಜು ಎಂಬುವರಿಗೆ ಸುಮಾರು 20 ಸಾವಿರ ರು. ಬೆಳೆ ನಷ್ಟವಾಗಿದೆ.