ಪದವಿ ವಿದ್ಯಾರ್ಥಿ ಪರೀಕ್ಷಿತ್ ಸಾಧನೆ
ಪಿ.ರವಿಕುಮಾರ್
ಹಾಸನ: ಪರೀಕ್ಷೆಯ ಮಾನದಂಡ ಇಟ್ಟುಕೊಂಡು ಪಾಠ ಪ್ರವಚನದಲ್ಲಿ ತೊಡಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ತಾವು ಇತರೆ ವಿದ್ಯಾರ್ಥಿಗಳಿಗಿಂತ ಸ್ವಲ್ಪ ಡಿಫರೆಂಟ್ ಅನ್ನೋದನ್ನು ಮೈಸೂರಿನಲ್ಲಿ ಪದವಿ ಅಭ್ಯಸಿಸುತ್ತಿರುವ ವಿದ್ಯಾರ್ಥಿ ಪರೀಕ್ಷಿತ್ ತೋರಿಸಿಕೊಟ್ಟಿದ್ದಾರೆ. ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಅಂತಾರೆ. ಇದು ಪರೀಕ್ಷಿತ್ ಕೆ. ನಾಯಕ್ ವಿದ್ಯಾರ್ಥಿ ಜೀವನದಲ್ಲಿ ಅಕ್ಷರ ಸಹ ನಿಜವಾಗಿದೆ.
ಹಾಸನ ಕೆಎಸ್ಆರ್ಪಿ ಪೊಲೀಸ್ ಸಿಬ್ಬಂದಿ ಕೃಷ್ಣಪ್ಪ ಎಂಬುವರ ಪುತ್ರ ಪರೀಕ್ಷಿತ್ ಕೆ. ನಾಯಕ್ ತನ್ನ ಸಹಪಾಠಿ ಆಫ್ಘಾನಿಸ್ಥಾನದ ಮೆಹ್ರಬುದಿನ್ ವಾಕ್ಮನ್ನೊಡಗೂಡಿ ಮಾನವ ಹಕ್ಕು ಮತ್ತು ಅಂತಾರಾಷ್ಟ್ರೀಯ ಸಂಸ್ಥೆ ಎಂಬ ಶೀರ್ಷಿಕೆಯಡಿ ಪ್ರಪಂಚದ ನಾನಾ ದೇಶಗಳಲ್ಲಿನ ಮಾನವ ಹಕ್ಕು ಮತ್ತು ಕಾನೂನು ವ್ಯವಸ್ಥೆಗಳ ಬಗ್ಗೆ ಸ್ವವಿವರವಾದ ಪುಸ್ತಕವನ್ನು ಇಂಗ್ಲಿಷ್ನಲ್ಲಿ ಸಿದ್ದಪಡಿಸಿದ್ದಾರೆ.
ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಾನಾ ರೀತಿಯ ಸ್ಟೈಲ್ಗಳನ್ನು ಮಾಡಿಕೊಂಡು ವೃಥಾ ಕಾಲ ಹರಣ ಮಾಡುವ ವಿದ್ಯಾರ್ಥಿಗಳೇ ಹೆಚ್ಚಾಗುತ್ತಿರುವ ಇಂಥ ಸಂದರ್ಭದಲ್ಲಿ ಪರೀಕ್ಷಿತ್ ಸಮಾಜಕ್ಕೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕೆಂಬ ಛಲ ಹೊತ್ತು ಇಂಥ ವಿಶೇಷ ಪುಸ್ತಕ ಹೊರ ತರುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಪರೀಕ್ಷಿತ್ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ತನ್ನ ಸಹಪಾಠಿ ಮೆಹ್ರಬುದಿನ್ ವಾಕ್ಮನ್ನೊಡಗೂಡಿ ಅಫ್ರಿಕಾ, ಅಮೆರಿಕಾ, ಯೂರೋಪ್ ಹಾಗೂ ಅರಬ್ ಪ್ರಾಂತ್ಯಗಳಲ್ಲಿನ ಮಾನವನ ಹಕ್ಕುಗಳು, ಹಕ್ಕುಗಳ ಉಲ್ಲಂಘನೆ ಮತ್ತು ಅದರ ರಕ್ಷಣೆಗೆ ಕಾನೂನಿನಲ್ಲಿ ಇರುವ ವ್ಯವಸ್ಥೆ, ಪೊಲೀಸರು ವಕೀಲರು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಅವರ ಪಾತ್ರಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಪುಸ್ತಕ ಅ.24ರಂದು ಬಿಡುಗಡೆಯಾಗಿದೆ.