ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ಕ್ರಾಸ್ ಉದ್ಘಾಟನೆ

Rashmi Kasaragodu
Updated On : 31 Oct 2013, 12:10 pm

ಕ.ಪ್ರ.ವಾರ್ತೆ   ಹೊಳೆನರಸೀಪುರ   ಅ.30
ಮಾನವೀಯತೆ, ಒಗ್ಗಟ್ಟು, ಸೇವೆ, ಸ್ವಾತಂತ್ರ್ಯ ಇವೇ ಮೊದಲಾದ ಸಾಮಾಜಿಕ ಕಳಕಳಿಯುಳ್ಳ ಉದ್ದೇಶ ಹೊಂದಿರುವ ರೆಡ್ಕ್ರಾಸ್ ಸಂಸ್ಥೆ ಮೂಲಕ ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಾಜಕ್ಕೆ ಅಗತ್ಯ ಸೇವೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಭಾರತೀಯ ರೆಡ್ಕ್ರಾಸ್ ಹಾಸನ ಜಿಲ್ಲಾಧ್ಯಕ್ಷ  ಎಚ್.ಪಿ.ಮೋಹನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಲಾದ ಯುವ ರೆಡ್ಕ್ರಾಸ್ ಘಟಕ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, 182 ರಾಷ್ಟ್ರಗಳಲ್ಲಿ ರೆಡ್ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಗಳಲ್ಲಿ ಕೋಟಿಗೂ ಮಿಗಿಲಾದ ಸ್ವಯಂ ಸೇವಕರು ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ತನ್ನ 150 ವರ್ಷಗಳ ಸುದೀರ್ಘ ಸೇವಾ ಕಾರ್ಯದಿಂದಲೇ ರೆಡ್ಕ್ರಾಸ್ 3 ಬಾರಿ ನೋಬೆಲ್ ಪಾರಿತೋಷಕ ಪಡೆದಿದೆ. ಸಂಸ್ಥೆ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಅತ್ಯುತ್ತಮ ಸೇವಾ ಮನೋಭಾವವನ್ನು ಗುರುತಿಸಿ ಅವರಿಗೂ ನೋಬೆಲ್ ಪ್ರಶಸ್ತಿ ದೊರೆತಿರುವುದು ಈ ಸಂಸ್ಥೆಯ ಸೇವಾ ಮನೋಭಾವ ಪ್ರಚುರಪಡಿಸುತ್ತದೆ ಎಂದು ತಿಳಿಸಿದರು.
ಈ ಕಾರಣದಿಂದ ಸರ್ಕಾರ ರಾಜ್ಯದ ಎಲ್ಲಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ರೆಡ್ಕ್ರಾಸ್ ಘಟಕವನ್ನು ಕಡ್ಡಾಯವಾಗಿ ಸ್ಥಾಪಿಸಬೇಕೆಂಬ ನಿಯಮ ಜಾರಿಗೆ ತಂದಿದೆ ಎಂದು ಹೇಳಿದರು.
ಕಾಲೇಜಿನಲ್ಲಿ ಯುವ ರೆಡ್ಕ್ರಾಸ್ ಘಟಕ ಉದ್ಘಾಟಿಸಿದ ಎಎಸ್ಪಿ ವಿನಾಯಕ ಪಾಟೀಲ್ ಅವರು, ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹತ್ತರವಾಗಿದ್ದು, ಯುವ ಜನತೆ ತಮಗೆ ಸಿಕ್ಕ ಅಮೂಲ್ಯ ಸಮಯವನ್ನು ವೃಥಾ ಕಾಲಹರಣ ಮಾಡದೇ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ರೆಡ್ಕ್ರಾಸ್ ತಾಲೂಕು ಅಧ್ಯಕ್ಷ ಡಾ.ಕೆ.ಸಿ.ಮರಿಯಪ್ಪ, ಜಿಲ್ಲಾ ಕಾರ್ಯದರ್ಶಿ ಅನುಗನಾಳ್ ಕೃಷ್ಣಮೂರ್ತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಮಾತನಾಡಿ, ನೊಂದವರ ಕಣ್ಣೀರು ಒರೆಸಿ ಅಶಕ್ತರಿಗೆ ನೆರವಾಗುವ ಮೂಲಕ ನಮ್ಮ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಲು ರೆಡ್ಕ್ರಾಸ್ ಉತ್ತಮ ವೇದಿಕೆಯಾಗಿದೆ ಎಂದರು.
ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಜಿಲ್ಲಾ ಸಂಚಾಲಕ ಶಬ್ಬೀರ್ ಅಹಮದ್, ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಎಂ.ಎನ್.ಜೈಪ್ರಕಾಶ್, ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಕಾರ್ಯದರ್ಶಿ ಶಿವಕುಮಾರ್, ಘಟಕದ ಸಂಚಾಲಕ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕಿರಣ್ರಾವತ್, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪಿ.ಆರ್.ಶಾಂತ, ಪ್ರಾಧ್ಯಾಪಕರಾದ ಎನ್.ವಿ.ಶ್ರೀನಿವಾಸ್, ಪ್ರೊ.ರಾಮೇಗೌಡ  ಇತರರು ಇದ್ದರು.


ಶೇ.80 ಫಲಿತಾಂಶ
ಹಾಸನ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸೆಪ್ಟೆಂಬರ್ನಲ್ಲಿ ನಡೆದ ಮಂಡ್ಯದ ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜಿನ ಹಿಂದಿ ಶಿಕ್ಷಕ್ ಕೋರ್ಸ್ ಪ್ರಶಿಕ್ಷಣಾರ್ಥಿಗಳಿಗೆ ಶೇ. 80 ಫಲಿತಾಂಶ ಲಭಿಸಿದೆ. ತಾತ್ಕಾಲಿಕ ಅಂಕಪಟ್ಟಿ ಪಡೆಯಲು ಪ್ರಾಂಶುಪಾಲರು, ಹಿಂದೀ ಶಿಕ್ಷಕ್ ಟ್ರೈನಿಂಗ್ ಕಾಲೇಜ್, ಹಿಂದಿ ಭವನ, ಜಿ.ಪಂ. ಕಚೇರಿ ಎದುರು, ಮಂಡ್ಯ, ಅಥವಾ 08232-226667, 9448268114ಗೆ ಸಂಪರ್ಕಿಸಿ ಎಂದು ಸಂಸ್ಥೆಯ ಪ್ರಾಂಶುಪಾಲರು ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement