ಮಾನಿನಿಯರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಅ. 30
ಮದ್ಯದ ಅಂಗಡಿಗಳನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸುವಂತೆ ಆಗ್ರಹಿಸಿ ಹಳೇಬೀಡು ಹೋಬಳಿಯ ಅಂಬೇಡ್ಕರ್ ನಗರದ ಸ್ತ್ರೀಶಕ್ತಿ ಮಹಿಳಾ ಸಂಘ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಬೇಲೂರು ತಾಲೂಕಿನ ಹಳೇಬೀಡಿನ ಹಳೇ ಸಂತೇಬೀದಿಯಲ್ಲಿರುವ ಮದ್ಯದ ಅಂಗಡಿಗಳು ಜನನಿಬಿಡ ಪ್ರದೇಶದಲ್ಲಿದೆ. ಇಲ್ಲಿ ಪ್ರತಿನಿತ್ಯ ಮದ್ಯವ್ಯಸನಿಗಳು ಕುಡಿದ ಅಮಲಿನಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ.ಇದರಿಂದ ಇಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿರುವ ಮದ್ಯದ ಅಂಗಡಿಗಳು ದಲಿತ ಕಾಲೋನಿ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪೊಲೀಸ್ ಠಾಣೆ ಸಮೀಪದಲ್ಲೇ ಇದ್ದರೂ ಇಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕಾಲೋನಿಯ ಸಮೀಪವೇ ಮದ್ಯದ ಅಂಗಡಿ ಇರುವುದರಿಂದ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಜೊತೆಗೆ ಗಂಡಸರು ಸಹ ಹೆಚ್ಚಿನ ಮದ್ಯ ವ್ಯಸನಗಳಾಗಿದ್ದಾರೆ. ಇದರಿಂದ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಮದ್ಯದ ಅಂಗಡಿಗಳನ್ನು ಬೇರೆಡೆಗೆ ವರ್ಗಾಹಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಾಲಮ್ಮ, ಸೌಭಾಗ್ಯ, ರುದ್ರಮ್ಮ, ಶೈಲಾ, ಲಕ್ಷ್ಮಮ್ಮ, ಲಕ್ಷ್ಮಿ ಇತರರು ಭಾಗವಹಿಸಿದ್ದರು.