ವ್ಯರ್ಥ ಹರಿದು ಹೋಗುತ್ತಿರುವ ಕುಡಿವ ನೀರು
ಕ.ಪ್ರ.ವಾರ್ತೆ ಜಾವಗಲ್ ಅ.30
ಪಟ್ಟಣದ ಜನತಾ ಬಡಾವಣೆಯ ದೊಡ್ಡಕೋಡಿಹಳ್ಳಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ಟ್ಯಾಂಕ್ ತುಂಬಿದ ನೀರು ನಾಲೆಯಲ್ಲಿ ಹರಿಯುವಂತೆ ಚರಂಡಿಗೆ ಹರಿದು ಹೋಗುತ್ತಿದೆ.
ಪ್ರತಿನಿತ್ಯ ಯಗಚಿ ಕುಡಿಯುವ ನೀರು ಶೇಖರಣೆ ಮಾಡುವ ವೇಳೆ ಟ್ಯಾಂಕ್ ತುಂಬಿ ನೀರು ಪಕ್ಕದ ಚರಂಡಿಗೆ ಹರಿದು ಹೋಗುತ್ತಿದ್ದರೂ ಗ್ರಾಪಂ ವಾಟರ್ಮನ್ ಅಥವಾ ಯಗಚಿ ಕುಡಿಯುವ ನೀರು ಸರಬರಾಜು ಉಸ್ತುವಾರಿ ಅಧಿಕಾರಿಗಳು ಗಮನಿಸದಿರುವುದರಿಂದ ಅಮೂಲ್ಯವಾದ ನೀರು ವೃಥಾ ಪೋಲಾಗುತ್ತಿದೆ ಎಂದು ಜನತೆ ದೂರಿದ್ದಾರೆ.
ಪಟ್ಟಣದ ಶೇ. 35 ರಷ್ಟು ನಾಗರಿಕರಿಗೆ ಮಾತ್ರವೇ ಯಗಚಿ ನೀರು ದೊರಕುತ್ತಿದ್ದು ಉಳಿದ ಶೇ. 65 ರಷ್ಟು ನಾಗರಿಕರಿಗೆ ಯಗಚಿ ಕುಡಿಯುವ ನೀರಿನ ಸೌಲಭ್ಯ ಇನ್ನೂ ಮರೀಚಿಕೆಯಾಗಿಯೆ ಉಳಿದಿದೆ. ಮಳೆ ಇಲ್ಲದೆ ಕೊಳವೆಬಾವಿಗಳು ಬತ್ತಿಹೋಗಿ ಜನರು ನೀರಿಗಾಗಿ ಹಾಹಾಕಾರ ಪಡುತ್ತಿರುವ ಇಂತಹ ಸಂದರ್ಭದಲ್ಲಿ ವೃಥಾ ನೀರನ್ನು ಪೋಲು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ತುಂಬಾ ಹೊಂಬಳ್ಳಿ ಆವರಿಸಿದ್ದು ವಿಷಜಂತುಗಳು ವಾಸಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ನೀರು ಚಿಲುಮೆ ಬುಗ್ಗೆಯಂತೆ ಹರಿಯುವುದರಿಂದ ಅಕ್ಕಪಕ್ಕದ ಮನೆಯ ಮಹಿಳೆಯರು ಬಟ್ಟೆ ತೊಳೆಯಲು ಅನುಕೂಲವಾಗಿದೆ.
ನೀರು ವೃಥಾ ಪೋಲಾಗುತ್ತಿರುವುದರ ಬಗ್ಗೆ ಗ್ರಾಪಂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಯಗಚಿ ಕುಡಿಯುವ ನೀರು ಸರಬರಾಜು ಉಸ್ತುವಾರಿ ಅಧಿಕಾರಿಗಳು ಕೂಡಲೇ ಗಮನ ಹರಿಸಿ ನೀರು ಪೋಲಾಗದಂತೆ ಹಾಗೂ ಟ್ಯಾಂಕ್ ಸುತ್ತಲೂ ಬೆಳೆದಿರುವ ಗಿಡಗಂಟೆಗಳನ್ನು ತೆಗಿಸಿ ಸ್ವಚ್ಛಗೊಳಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.