'ಕೈ' ಕಾರ್ಯಕಾರಿಣಿ ಸಭೆಗೆ ಆಹ್ವಾನಿಸದೆ ಅವಮಾನ
ಕ.ಪ್ರ.ವಾರ್ತೆ ಹಾಸನ ಅ.31
ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಜಿಲ್ಲೆಯ ಮುಖಂಡರಿಗೆ ಆಹ್ವಾನ ನೀಡದೆ, ಗೇಟ್ನಿಂದ ಹೊರಗೆ ಕಳುಹಿಸುವ ಮೂಲಕ ಅಗೌರವ ತೋರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಡಿ.ಸಿ. ಸಣ್ಣಸ್ವಾಮಿ ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರನ್ನು ದಿಕ್ಕು ತಪ್ಪಿಸುವ ಮೂಲಕ ಪಕ್ಷ ಹೊಡೆಯುವ ಕೃತ್ಯ ನಡೆಸಿ ನಾಶವನ್ನು ಕೆಲವರು ಮಾಡುತ್ತಿದ್ದು, ಈ ವಿರುದ್ಧ ಕೆಪಿಸಿಸಿ ಹಾಗೂ ಎಐಸಿಸಿ ಯ ಗಮನಕ್ಕೆ ತರುವುದಾಗಿ ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಸಭೆ ನಡೆಸಿ ಕಾರ್ಯಕರ್ತರಿಗೆ ಧೈರ್ಯ ನೀಡಿದರು.
ಆದರೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಶಾಸಕರು, ಮಾಜಿ ಶಾಸಕರು, ಪಕ್ಷದಿಂದ ಟಿಕೆಟ್ ಪಡೆದು 2004, 2008 ಮತ್ತು 2013ರಲ್ಲಿ ಸೋತಂತಹ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು ಕಾಂಗ್ರೆಸ್ ಮತ್ತು ಸದಸ್ಯರು, ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಕಮಿಟಿ ಸದಸ್ಯರಿಗೆ ಸಭೆಯನ್ನು ಕರೆಯಲಾಗಿತ್ತು ಎಂದು ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಆಂತರಿಕ ವಿಚಾರ ಹಾಗೂ ಸದಸ್ಯತ್ವ ನೋಂದಣಿ ವಿಚಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಬಹುಮುಖ್ಯ ಸಭೆಯನ್ನು ಕರೆದು, ಸಭೆಯಿಂದ ದಿ. ಶ್ರೀಕಂಠಯ್ಯನವರ ಪುತ್ರ ಎಚ್.ಎಸ್. ವಿಜಯಕುಮಾರ್, ಪಧವೀದರ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಜಾವಗಜ್ ಮಂಜುನಾಥ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಮಾಜಿ ಬ್ಲಾಕ್ ಅಧ್ಯಕ್ಷ, ವೀರಶೈವ ಮುಖಂಡ ಎಚ್.ಪಿ. ಕಾಂತರಾಜು, ಕೆ.ಬಿ. ಚಂದ್ರು ಅವರಿಗೆ ಸಭೆಗೆ ಕರೆಯದೆ ಗೇಟ್ನಿಂದ ಹೊರಗೆ ಕಳುಹಿಸಿ ಪಕ್ಷದ ಘನೆತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರಿದರು.
ಸಭೆಗೆ ಕೆಲವು ಪಕ್ಷದಲ್ಲಿ ಇಲ್ದವರಿಗೆ ಪಾಸ್ನ್ನು ನೀಡುವುದರ ಮೂಲಕ ಹಿರಿಯ ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸಲಾಗಿದೆ. ಇದನ್ನು ದುರ್ಲಾಭ ಮಾಡಿಕೊಂಡು ವೈ.ಪಿ. ರಾಜೇಗೌಡರಂತಹ ಸ್ವಯಂಘೋಷಿತ ನಾಯಕರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ದಿಕ್ಕು ತಪ್ಪಿಸುತ್ತಿದ್ದಾರೆ. ಪಕ್ಷದಲ್ಲಿ ಇಲ್ಲದ ನಾಗೇಶ್, ಉದಯವಾರ ಗುಂಡ, ಅರ್ಚನಾ, ರಾಜಮ್ಮ ಮತ್ತಿತ್ತರಿಗೆ ಪಾಸ್ ನೀಡುವ ಮೂಲಕ ಜೆಡಿಎಸ್ ಮತ್ತು ಬಿಜೆಪಿಗೆ ಪರೋಕ್ಷವಾಗಿ ಶಾಮೀಲಾಗುತ್ತಿದ್ದಾರೆ ಎಂದು ಟೀಕಿಸಿದರು.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಹಿರಿಯ ಮುಖಂಡರನ್ನು ಸಂಪರ್ಕಿಸಿ ತಟಸ್ಥವಾಗಿರುವ ಎಲ್ಲಾ ಹಿರಿಯ ಕಾಂಗ್ರೆಸಿಗರನ್ನು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಯಲ್ಲಿ ನಿಂತು ಸೋತಂತಹ ಅಭ್ಯರ್ಥಿಗಳನ್ನು ಪಕ್ಷದ ಹಿರಿಯ ಮುಖಂಡರ ಸಲಹೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಅನುಮತಿ ಪಡೆದು ಸದ್ಯದಲ್ಲೇ ಹಿರಿಯ ಮುಖಂಡರ ಸಭೆಯನ್ನು ಕೆರೆಯುವುದಾಗಿ ಹೇಳಿದ ಅವರು, ಪಕ್ಷದಲ್ಲಿ ದಿಕ್ಕು ತಪ್ಪಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಕ್ಷವನ್ನು ಬಲಪಡಿಸಬೇಕಾದಂತಹ ಅನಿವಾರ್ಯ ಹೆಚ್ಚಾಗಿದೆ ಎಂದರು.
ಜಿಲ್ಲಾಧ್ಯಕ್ಷ ಬಿ. ಶಿವರಾಂ ಅವರು ಪಕ್ಷದ ಹಿರಿಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಪಕ್ಷ ಬಲವರ್ಧನೆಯಾಗುತ್ತದೆ. ಇನ್ನು ಮುಂದಾದರೂ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜು, ರೆಹಮತ್ ಉಲ್ಲಾ, ಮಲ್ಲೇಶ್ ಮತ್ತು ದೊಡ್ಡಹೀರಯ್ಯ ಇದ್ದರು.