ಗೌಡರಿಗೀಗ ಕಾಫಿ ಬೆಳೆಗಾರರ ನೆನಪು
ಕ.ಪ್ರ.ವಾರ್ತೆ ಹಾಸನ ಅ 31
ಅನಾವೃಷ್ಟಿಯಿಂದ ಕಾಫಿ, ಏಲಕ್ಕಿ, ಮೆಣಸು ಬೆಳೆ ನಾಶವಾಗಿ ಸಂಕಷ್ಟದಲ್ಲಿದ್ದ ಬೆಳೆಗಾರರ ಪರವಾಗಿ ಮಾತನಾಡದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚುನಾವಣೆ ಹತ್ತಿರ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬೆಳೆಗಾರರ ಬಗ್ಗೆ ಅತಿಯಾದ ಕಾಳಜಿ ತೋರುವ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಕಾಫಿ ಬೆಳೆಗಾರ ಬಿ.ಎ. ಜಗನ್ನಾಥ್ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಹೆಚ್ಚಿದ ತಾಪಮಾನದಿಂದ ಪ್ಲಾಂಟೇಷನ್ ಬೆಳೆಗಳು ಅನಾವೃಷ್ಟಿಯಿಂದ ಹಾಳಾಗಿದ್ದರೆ ಮಳೆಗಾಲದಲ್ಲಿ ಹೆಚ್ಚಿನ ಗಾಳಿ ಮತ್ತು ಮಳೆಯಿಂದಾಗಿ ಅತಿವೃಷ್ಠಿ ಉಂಟಾಗಿ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಜಿಲ್ಲೆಯಲ್ಲಿ ಸುಮಾರು 5ರಿಂದ 6 ಸಾವಿರ ಕೋಟಿ ರು.ಗಳ ಮೌಲ್ಯದ ಬೆಳೆಗಳು ಮತ್ತು ಗಿಡಗಳು ನಾಶವಾಗಿದೆ ಎಂದು ಹೇಳಿದರು.
ದೇವೇಗೌಡರು ನಡೆಸಿದಂತಹ ಸಭೆಯಲ್ಲಿ ಇಲಾಖೆಯ ಮುಖಂಡರು ಸಿಲ್ವರ್ ಓಕ್ ಮತ್ತು ಅಕೇಷಿಯಾ ಮರಗಳಿಗೆ ಪರವಾನಗಿ ಬೇಕಿಲ್ಲ ಎಂದು ತಿಳಿಸಿರುವುದು ಆಶ್ಚರ್ಯವಾಗಿದೆ. ಬೆಳೆಗಾರರು ತಾವೆ ಬೆಳೆಸಿದ ಮರಗಳನ್ನು ಕಡಿಯಲು ಅಧಿಕಾರ ನೀಡಬೇಕು ಎಂದು ಕೇಳುತ್ತಿದ್ದಾರೆ. ಆದರೆ ಪರವಾನಗಿ ಬೇಕಿಲ್ಲದ ಮರಗಳನ್ನೆಲ್ಲ ಪರವಾನಗಿ ಇಲ್ಲದ ಕಾಳಸಂತೆಯಲ್ಲಿ ಮಾರಾಟವಾದ ಮರಗಳ ಮೂಲಕ ಎಲ್ಲಾ ಸಾಮೀಲ್ಗಳು ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ವಂಚನೆಯಾಗುತ್ತಿದೆ ಎಂದರು.
ಕಾಡಾನೆ ಹಾವಳಿಯಿಂದ ಆಲೂರು, ಸಕಲೇಸಪುರ ಸೇರಿದಂತೆ ಇತರೆ ಕಡೆಗಳಲ್ಲಿ ಜನರು ಪ್ರಾಣ ಕಳೆದುಕೊಂಡು ಸಾವಿರಾರು ಕೋಟಿ ರು.ಗಳ ನಷ್ಟ ಉಂಟಾಗಿದ್ದರೂ ಇದುವರೆಗೂ ಸ್ಪಂದಿಸದ ಹಿರಿಯ ಮುತ್ಸದ್ಧಿ, ಈಗ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಯ ಪರಿಹಾರಕ್ಕೆ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದು ಬೆಳೆಗಾರರನ್ನು ಮೆಚ್ಚಿಸಲು ಹೂಡುತ್ತಿರುವ ತಂತ್ರವಾಗಿದೆ ಎಂದ ಅವರು, ಈಗಾಗಲೇ ಅರಣ್ಯ ಸಚಿವ ರಮಾನಾಥ ರೈ ಅವರು ನವೆಂಬರ್ 4,5 ಮತ್ತು 6ರಂದು ಜಿಲ್ಲೆಯ ಪ್ರವಾಸ ಕೈಗೊಂಡು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಕಾರ್ಯಕ್ರಮ ಕೈಗೊಂಡಿರುವ ಸಂದರ್ಭದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಸತತ ಬೆಲೆ ಕುಸಿತ, ಕೋಳೆರೋಗ ಮತ್ತು ಕೊಕ್ಕೆಕಂದು ರೋಗದಿಂದ ಬಳಲಿರುವ ಏಲಕ್ಕಿ ಬೆಳೆಗಾರರು ಬ್ಯಾಂಕ್ಗಳಿಂದ ಪ್ಯಾಕೇಜ್ ಕೊಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿ ಶಿಫಾರಸು ಪತ್ರವನ್ನು ಹೋದಾಗ ದೇವೇಗೌಡರು ನಿಯೋಗದ ಸದಸ್ಯರೊಡನೆ ಸೌಜನ್ಯದಿಂದ ಮಾತನಾಡಿಸುವ ಕೃಪೆಯನ್ನು ತೋರಲಿಲ್ಲ. ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಮಲೆನಾಡಿನ ಭಾಗದ ರೈತರು ಸಂಪೂರ್ಣವಾಗಿ ನೀಡಿದ ಬೆಂಬಲವನ್ನು ದೇವೇಗೌಡರು ಮರೆತು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ದೂರಿದರು.
ಅವರು ಸರ್ಕಾರದ ಸವಲತ್ತನ್ನು ಬಳಿಸಿ ಅವರಿಗೆ ಮೀಸಲಾದ ಕಚೇರಿಯನ್ನು ತೆರೆದು ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡದೆ ಈಗ ಪರಿಹಾರ ಕೇಳಿ ನನಗೆ ಅರ್ಜಿ ನೀಡಲಿಲ್ಲ ಎಂದ ಹೇಳಿಕೆ ನೀಡುತ್ತಿರುವುದು ಮತದಾರರಿಗೆ ಮಾಡಿರುವ ವಂಚನೆಯಾಗಿದೆ. ಆದ್ದರಿಂದ ಈಗಲಾದರೂ ಜಿಲ್ಲೆಯ ಮತದಾರರು ಎಚ್ಚೆತ್ತುಕೊಂಡು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.