ಪುರಾತನ ಶಿವಾಲಯ ಸ್ವಚ್ಛತೆಗೆ ಆಗ್ರಹ
ಹಾಸನ: ನಗರದ ಪೆನ್ಷನ್ ಮೊಹಲ್ಲಾದ ಪೊಲೀಸ್ ಬಡಾವಣೆಯ ಹಿಂಬದಿ ಇರುವ ಪುರಾತನ ಶಿವನ ದೇವಾಲಯಕ್ಕೆ ನಗರಸಭೆ ರಕ್ಷಣೆ ನೀಡಿ ಸ್ವಚ್ಛಗೊಳಿಸಬೇಕು ಮತ್ತು ದೇವಾಲಯದ ಪುನರ್ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರಕಾಶ್, ವೆಂಕಟೇಶ್, ಸಂಚಾಲಕ ಜಿ.ಎಸ್. ಅವಿನಾಶ್ ಒತ್ತಾಯಿಸಿದ್ದಾರೆ. ಈ ದೇವಾಲಯವು ಯಾವುದೇ ರಕ್ಷಣೆ ಇಲ್ಲದೆ ದುಸ್ಥಿತಿ ಕಂಡಿದೆ. ದೇವಾಲಯದ ಆವರಣದಲ್ಲಿ ಕಸಾಯಿಖಾನೆಯು ತೆರೆದಿದ್ದು, ಅದನ್ನು ಕೂಡಲೇ ಸ್ಥಳಾಂತರಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಈಗಾಗಲೇ ದೇವಾಲಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ದೇವಾಲಯದ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಆ ಜಾಗದಲ್ಲಿ ಡೇರೆ ಹಾಕುವ ಪ್ರಯತ್ನ ನಡೆದಿದೆ. ಕೂಡಲೇ ನಗರಸಭೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.