ಉರುಳಿಗೆ ಸಿಲುಕಿ ಜಿಂಕೆ ಸಾವು
ಹುಣಸೂರು: ಎರಡು ವರ್ಷದ ಜಿಂಕೆಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಬೀರತಮ್ಮನಹಳ್ಳಿ ಪ್ರಾದೇಶಿಕ ಅರಣ್ಯದಲ್ಲಿ ಸೋಮವಾರ ಜರುಗಿದೆ. ತಾಲೂಕಿನ ಹನಗೋಡು ಹೋಬಳಿಯ ಬೀರತಮ್ಮನಹಳ್ಳಿ ಗ್ರಾಮಕ್ಕೆ ಸೇರಿದ ಪಿರಿಯಾಪಟ್ಟಣ ಪ್ರಾದೇಶೀಕ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಕಳ್ಳಬೇಟೆಗಾರರು ತಂತಿ ಹಾಗೂ ವೈರ್ಗೆ ಕಟ್ಟಿರುವ ಉರುಳಿಗೆ ಎರಡು ವರ್ಷದ ಹೆಣ್ಣು ಜಿಂಕೆಯು ಸಿಕ್ಕಿಕೊಂಡು ಮೃತಪಟ್ಟಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚಿನ್ನಪ್ಪ, ವನಪಾಲಕ ಸುಂದರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಡಾ. ಶಶಿಧರ್ ನಡೆಸಿದರು. ಭಾನುವಾರ ಪಿರಿಯಾಪಟ್ಟಣ ತಾ. ಬೈಲುಕುಪ್ಪೆ ಬಳಿ ಉರುಳಿಗೆ ಸಿಕ್ಕಿ ಚಿರತೆ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.