ಗಣಪತಿಗೆ ರಜತ ಕವಚ ಸಮರ್ಪಣೆ
ಹೊಳೆನರಸೀಪುರ: ಪಟ್ಟಣದ ಕೋನೇರಿ ರಾಮಶೆಟ್ಟರ ಛತ್ರದಲ್ಲಿ ಶ್ರೀಗಣಪತಿ ದೇವರಿಗೆ ರಜತ ಕವಚ ಸಮರ್ಪಣೆ ಸಮಾರಂಭ ನಡೆಯಿತು. ಸಮರ್ಪಣಾ ಸಮಾರಂಭದಲ್ಲಿ ಛತ್ರದ ಮುಖ್ಯಸ್ಥ ಎಚ್.ಆರ್. ಅನಂತ ಮಾತನಾಡಿ ಪಟ್ಟಣದ ಛತ್ರಗಳಲ್ಲಿ ಇದು ಬಹಳ ಹಳೆಯದಾಗಿದ್ದು ಈಚೆಗೆ ಛತ್ರವನ್ನು ನವೀಕರಣಗೊಳಿಸಲಾಗಿದೆ. ಜತೆಗೆ ಸಾರ್ವಜನಿರು ಇಲ್ಲಿ ಮದುವೆ ಮತ್ತಿತರ ಸಮಾರಂಭ ನಡೆಸಲು ಅಗತ್ಯ ಸವಲತ್ತು ಕಲ್ಪಿಸುವ ಉದ್ದೇಶವಿದೆ. ಛತ್ರದ ನವೀಕರಣಕ್ಕೆ ಸಾರ್ವಜನಿಕರು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದರು. ಛತ್ರದಲ್ಲಿನ ಗಣಪನಿಗೆ ಬೆಳ್ಳಿ ಕವಚ ಮಾಡಿಸಿಕೊಟ್ಟ ಕೆ.ಎಸ್.ನಾಗೇಂದ್ರ ಅವರನ್ನು ಇದೇ ಸಂದರ್ಭದಲ್ಲಿ ಪ್ರಶಂಶಿಸಿ ಕೆ.ಎಸ್.ನಾಗೇಂದ್ರ ಮತ್ತು ಪುತ್ರ ಬಾಲಾಜಿ ಅವರನ್ನು ಅಭಿನಂದಿಸಲಾಯಿತು. ನೂರು ವರ್ಷಕ್ಕೂ ಹೆಚ್ಚಿನ ಛತ್ರದ ಗಣಪನಿಗೆ ರಜತ ಕವಚ ಅರ್ಪಿಸುವ ವೇಳೆ ಕೋನೇರಿ ರಾಮಶೆಟ್ಟಿ ಕುಟುಂಬ ವರ್ಗದವರು, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎಸ್.ಅರುಣ್, ಕಾರ್ಯದರ್ಶಿ ರಂಗನಾಥಶೆಟ್ಟಿ, ಶ್ರೀನಿವಾಸಗುಪ್ತ, ಕೆ.ಕೆ.ಮುರುಳಿಧರ ಇತರರು ಇದ್ದರು.