ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಂಡವಾಳ ಹೂಡಲು ಅಪನಂಬಿಕೆ ಕಾರಣ ರುಪಾಯಿ ಮೌಲ್ಯ ಕುಸಿತ

Rashmi Kasaragodu
Updated On : 3 Sept 2013, 12:24 pm


ಕ.ಪ್ರ.ವಾರ್ತೆ   ಹೊಳೆನರಸೀಪುರ   ಸೆ. 2
ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ಬಂಡವಾಳ ಹೂಡಲು ಅಪನಂಬಿಕೆ ಹೊಂದಿರುವ ಕಾರಣದಿಂದಾಗಿ ರುಪಾಯಿ ಮೌಲ್ಯ ಕುಸಿತ ಕಾಣುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರುಪಾಯಿ ಅಪಮೌಲ್ಯದ ಕುರಿತಂತೆ ವಿಶ್ಲೇಷಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 1991 ರಿಂದ ಲೋಕಸಭೆಯನ್ನು ಪ್ರತಿನಿಧಿಸಿದ್ದೇನೆ. ಅಲ್ಲಿನ ಬಹುತೇಕ ವಿಷಯಗಳು ತಮ್ಮ ಗಮನಕ್ಕೆ ಬಂದಿದೆ. ಆದರೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ನಾಯಕರು ದೇಶದ ಆರ್ಥಿಕ ಸುಭದ್ರತೆಗೆ ಸರಿಯಾದ ಯೋಜನೆ ರೂಪಿಸಿಕೊಳ್ಳದೆ ಇರುವುದರಿಂದ ಇಂದು ದೇಶದಲ್ಲಿ ಹಣದುಬ್ಬರ ಅಧಿಕಗೊಳ್ಳಲು ಕಾರಣವಾಗಿದೆ ಎಂದರು.
ಕೇಂದ್ರ ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರುತ್ತಿರುವುದು ಶ್ಲಾಘನೀಯ ಅಂಶವಾದರೂ, ಸ್ವಾತಂತ್ರ್ಯ ಬಂದು 65 ವರ್ಷಗಳಿಂದಲೂ ದೇಶದಲ್ಲಿ ಶೇ.67 ರಷ್ಟು ಜನರು ಬಡತನದ ರೇಖೆಯಲ್ಲಿಯೇ ಇದ್ದಾರೆ ಎಂದ ಅವರು, ಹಾಗಿದ್ದಲ್ಲಿ ದೇಶವನ್ನಾಳಿದ ಕೇಂದ್ರ ಸರ್ಕಾರಗಳು ನೀಡಿರುವ ಹನ್ನೆರಡು ಪಂಚ ವಾರ್ಷಿಕ ಯೋಜನೆಗಳಲ್ಲಿ ಮಾಡಿದ ಅಭಿವೃದ್ಧಿಯಾದರೂ ಏನು ಎಂದು ದೇವೇಗೌಡರು ಪ್ರಶ್ನಿಸಿದರು.
ಸಂಸದರ ಸಂಖ್ಯೆಯ ಅಧಾರದ ಮೇಲೆ:  ಇತ್ತೀಚಿನ ದಿನಗಳಲ್ಲಿ ಯುಪಿಎ ಸರ್ಕಾರ ಲೋಕಸಭೆಯಲ್ಲಿನ ಸಂಸದರ ಸಂಖ್ಯೆಯ ಅಧಾರದ ಮೇಲೆ ಪ್ರಶ್ನೋತ್ತರದ ಕಾಲ ಮಿತಿಗೆ ಅವಕಾಶ ನೀಡುತ್ತಿರುವುದು ಸಮಯೋಚಿತವಲ್ಲ ಎಂದ ಅವರು, ಈ ಹಿಂದೆ ವಾಜಪೇಯಿ ಸರ್ಕಾರದಲ್ಲಿ ತಾವೂ ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದು, ಆಗೆಲ್ಲ ಸಮಸ್ಯೆಗಳ ಚರ್ಚೆಗೆ ಸಾಕಷ್ಟು ಅವಕಾಶ ನೀಡಲಾಗುತ್ತಿತ್ತು.
ಆದರೆ ಇಂದು ಅವುಗಳನ್ನು ಗಾಳಿಗೆ ತೂರಿ ಸಮಸ್ಯೆಗಳ ಚರ್ಚೆಗೆ ಸಮಯಾವಕಾಶ ಇಲ್ಲದಂತೆ ಮಾಡಿರುವುದು ತಮಗೆ ತುಂಬಾ ಬೇಸರ ತರಿಸಿದೆ. ಆದ್ದರಿಂದ ತಾವು ಈಚೆಗೆ ಲೋಕಸಭೆ ಅಧಿವೇಶನ ಕಾಲದಲ್ಲಿ ಅಷ್ಟೇನು ಆಸಕ್ತಿ ತೋರಲಾಗುತ್ತಿಲ್ಲ ಎಂದು ನುಡಿದರು.
ರೇಲ್ವೆ ಯೋಜನೆ ಕಾಮಗಾರಿ ಅಪೂರ್ಣ: ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವು ರೇಲ್ವೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಅವುಗಳಿನ್ನೂ ಪೂರ್ಣಗೊಳ್ಳದಿರಲು ಸಾಕಷ್ಟು ಕಾರಣಗಳು ಇವೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿಕೊಡುವುದಾಗಿ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಸರ್ಕಾರ ಎತ್ತಿನ ಹೊಳೆ ಯೋಜನೆ ಜಾರಿಗೆ ತರುತ್ತಿರುವ ವಿಚಾರದಲ್ಲಿ ಮೂಲಭೂತವಾಗಿ ಈ ಯೋಜನೆ ಅನುಷ್ಠಾನಕ್ಕೆ ತರುವುದರಿಂದ ನೀರಿನ ಸಾಂದ್ರತೆ ಎಷ್ಟು ದೊರಕಲಿದೆ ಎಂಬ ಮುಖ್ಯ ಅಂಶಗಳು ನಮ್ಮ ರಾಜಕಾರಣಿಗಳಲ್ಲಿ ಇಲ್ಲವೇ ಇಲ್ಲ ಎಂದ ದೇವೇಗೌಡರು, ಇಂತಹ ಭರವಸೆ ನೀಡುತ್ತಿರುವ ನಮ್ಮ ರಾಜಕಾರಣಿಗಳಿಂದ ಆ ಭಾಗದ ಜನರಿಗೆ ಎಷ್ಟರ ಮಟ್ಟಿಗೆ ಈ ಸೌಲಭ್ಯ ದೊರಕಿ ಉಪಯುಕ್ತತೆಯಾಗಲಿದೆ ಎಂಬುದನ್ನು ಹೇಳಲಿಕ್ಕೆ ಅಗದು ಎಂದು ಮಾರ್ಮಿಕವಾಗಿ ನುಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು ಒಂದು ಹಂತದಲ್ಲಿ ಕೇಂದ್ರದ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಅವರಂತಹ ಧೀಮಂತ ನಾಯಕರು ಕೇಂದ್ರದಲ್ಲಿ ಸಾಕಷ್ಟು ಮಂದಿ ಇಲ್ಲದಿರುವುದು ಹಲವು ನ್ಯೂನತೆಗಳಿಗೆ ಕಾರಣವಾಗಿದೆ ಎಂದ ಅವರು ಎಲ್.ಕೆ.ಅಡ್ವಾಣಿ ಅಂತಹವರನ್ನು ಅವರ ಪಕ್ಷದವರೇ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅಂತಹ ಧೀಮಂತ ನಾಯಕರ ಮಾರ್ಗದರ್ಶನ ಅಯಾ ಪಕ್ಷಗಳಿಗೆ ಅವಶ್ಯಕತೆ ಇದೆ ಎಂಬುದನ್ನು ಆ ಪಕ್ಷದವರು ಅರಿಯ ಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement