ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಹುಮಾನ ಗುರಿ ಇರಿಸಿಕೊಂಡು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಲ್ಲ

Rashmi Kasaragodu
Updated On : 3 Sept 2013, 12:25 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ.2
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲರೂ ತಾವು ಬಹುಮಾನ ಗೆಲ್ಲುವುದಷ್ಟನ್ನೇ ಗುರಿಯಾಗಿಸಿಕೊಂಡು ಭಾಗಿಯಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ತಿಳಿಸಿದರು.
 ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ವಾಸವಿ ಆಂಗ್ಲಮಾಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಸಂಘಟಿಸಿರುವ ಎರಡು ದಿನಗಳ ನಗರ ಬಿ. ವಿಭಾಗದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
 ಸೋಲು ಗೆಲವುಗಳ ನಡುವೆ ತಾವು ಮಾಡುವ ಅಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗುತ್ತದೆ ಎಂಬ ಮೂಲ ಅಂಶ ಮರೆತುಬಿಡುತ್ತಾರೆ. ಇದನ್ನು ಗಮನದಲ್ಲಿಟ್ಟು ಅಭ್ಯಾಸ ಮಾಡಿದವನು ತನ್ನ ಗೆಲುವನ್ನು ತಾನು ಸಾಧಿಸಿದಂತೆಯೇ ಎಂದು ಹೇಳಿದರು. ಕ್ರೀಡೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ಸನ್ನು ಸಾಧಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ಡಿಡಿಪಿಐ ಜಿ.ಆರ್. ಬಸವರಾಜ, ಚಿಮ್ಮುವ ಉತ್ಸಾಹದೊಂದಿಗೆ ಪಾಲ್ಗೊಳ್ಳುವ ವಿದ್ಯಾರ್ಥಿಯ ಅಂತರ್ಗತ ಪ್ರತಿಭೆಯನ್ನು ಹೊರಚೆಲ್ಲಲು ಪ್ರೋತ್ಸಾಹಿಸುವುದೇ ಕ್ರೀಡಾಕೂಟದ ಮುಖ್ಯ ಉದ್ದೇಶ. ರಾಜ್ಯಮಟ್ಟದಲ್ಲಿ ಎದುರಿಸಬಹುದಾದ ಸ್ಪರ್ಧೆಯ ಕಠಿಣತೆಯನ್ನು ಗಮನದಲ್ಲಿಟ್ಟು ಪರಿಶ್ರಮಿಗಳಾಗಿ ಎಂದು ಕಿವಿಮಾತು ಹೇಳಿದರು.
 ವಾಸವಿ ವಿದ್ಯಾಕೇಂದ್ರ ಟ್ರಸ್ಟ್ ಅಧ್ಯಕ್ಷ ರಾಜಗೋಪಾಲಶ್ರೇಷ್ಠಿ ಪಾರಿತೋಷಕಗಳ ಅನಾವರಣಗೊಳಿಸಿ ಮಾತನಾಡಿ, ಸ್ಪರ್ಧಾಳುಗಳು ಶಾಂತ ಚಿತ್ತದಿಂದ ಪಾಲ್ಗೊಂಡು ವಿಜಯಿಗಳಾಗಬೇಕು ಎಂದು ಶುಭ ಹಾರೈಸಿದರು.
 ಆರಂಭದಲ್ಲಿ, ಎರಡು ಬಾರಿ ರಾಜ್ಯಮಟ್ಟದ ವಿಕಲಾಂಗಚೇತನರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನಿತನಾಗಿದ್ದ ವಾಸವಿ ಶಾಲೆಯ ಸಿ.ವೈ. ಸಮರ್ಥ ಕ್ರೀಡಾಜ್ಯೋತಿ ತರುವ ಗೌರವಕ್ಕೆ ಪಾತ್ರನಾದನು.  ಕ್ರೀಡಾಪಟುಗಳ ಪರವಾಗಿ ಮಧುಸೂದನ್, ತೀರ್ಪುಗಾರರ ಪರವಾಗಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಜಿ. ರಾಮಸ್ವಾಮಿಗೌಡ ಪ್ರಮಾಣವಚನ ಸ್ವೀಕರಿಸಿದರು.
 ವಾಸವಿ ಶಾಲೆಯ ಮುಖ್ಯ ಅಧ್ಯಾಪಕಿ ಶೀಲಾ ಸ್ವಾಗತಿಸಿ, ಸುಮಿತ್ರ ವಂದಿಸಿ, ವೇದಾವತಿ ನಿರೂಪಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ಜಿ. ಈಶ್ವರಪ್ಪ, ತಾ. ದೈಹಿಕ ಶಿಕ್ಷಣಾಧಿಕಾರಿ ಗೋವಿಂದೇಗೌಡ, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ನರಸಿಂಹೇಗೌಡ, ವಾಸವಿ ವಿದ್ಯಾಕೇಂದ್ರ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement