ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆಗಳ ಅಭಿವೃದ್ಧಿಗೆ ಹಿಡಿದಿದೆ ಗ್ರಹಣ

Rashmi Kasaragodu
Updated On : 3 Sept 2013, 12:45 pm

ಹಾಸನ: ಸುಂದರ ನಗರ ನಿರ್ಮಾಣಕ್ಕೆ ರಸ್ತೆಗಳ ಅಭಿವೃದ್ಧಿ ಬಹಳ ಮುಖ್ಯ. ಆದರೆ ಹಾಸನ ನಗರ ಹಾಗೂ ಹೊರ ಜಿಲ್ಲೆಗಳಿಗೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಆದೇಕೋ ಇನ್ನೂ ಬಿಡುತ್ತಿಲ್ಲ.
ರಸ್ತೆಯಲ್ಲಿ ಬಿದ್ದಿರುವ ಆಳುದ್ದದ ಗುಂಡಿಗಳಲ್ಲಿ ಮಳೆಗಾಲ ಬಂತೆಂದರೆ ನೀರು ತುಂಬಿಕೊಂಡು ವಾಹನಗಳು ಸಂಚರಿಸಲು ಹರಸಾಹಸ ಪಡಬೇಕು. ಮಳೆಗಾಲದ ನಂತರ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ವಾಹನಗಳು ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸುತ್ತಿವೆ. ಹಾಸನದಿಂದ ದುದ್ದ ಮಾರ್ಗವಾಗಿ ತಿಪಟೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿಯ ಕನಸು ಅದೇಕೋ ನನಸಾಗುವ ಲಕ್ಷಣಗಳಿಲ್ಲ. ಅದೇ ರೀತಿ ಹಾಸನದಿಂದ ಗೊರೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಹಿಡಿದ ಗ್ರಹಣ ಬಿಡುತ್ತಿಲ್ಲ. ಇನ್ನೂ ನಗರದ ರಸ್ತೆಗಳಲ್ಲಿ ಹೆಚ್ಚು ಹೆಚ್ಚು ಗುಂಡಿಗಳಾಗಿದ್ದು, ಅದನ್ನು ಮುಚ್ಚುವಂತಹ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಯವರು ಮುಂದಾಗುತ್ತಿಲ್ಲ. ಸಾರ್ವಜನಿಕರು ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡಲು ಪ್ರಯಾಸ ಪಡುತ್ತಿದ್ದರೆ, ಅಧಿಕಾರಿಗಳು ಕಂಡರೂ ಕಂಡರಿಯಂತೆ ಕೈಕಟ್ಟಿ ಕುಳಿತಿದ್ದಾರೆ.

ಕಾಮಗಾರಿ ಹೊಣೆ ಹೊತ್ತ ಕಂಪನಿ ನಾಪತ್ತೆ:
ಹಾಸನ-ದುದ್ದ-ತಿಪಟೂರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದರ ಕಾಮಗಾರಿ ಹೊಣೆ ಹೊತ್ತ ಅಭಿಜಿತ್ ಗ್ರೂಪ್ ಕಾಮಗಾರಿ ನಿರ್ವಹಿಸದೆ ಕಾಣೆಯಾಗಿದೆ. ಈ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನಗಳು ಕೆಟ್ಟು ರಸ್ತೆಯಲ್ಲಿಯೇ ನಿಲ್ಲುವಂತಾಗಿವೆ. ವಾಹನಗಳ ಟೈರ್ ಪಂಚರ್ ಆಗಿ ಪ್ರಯಾಣಿಕರು ಅವಸ್ಥೆ ಪಡುತ್ತಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಇದರತ್ತ ಗಮನ ಹರಿಸುತ್ತಿಲ್ಲ.
ಇನ್ನೂ ಹಾಸನದಿಂದ ಆರಕಲಗೂಡಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಯು ಹಾಸನ ಕ್ಷೇತ್ರ, ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರ ಮತ್ತು ಅರಕಲಗೂಡು ಕ್ಷೇತ್ರಕ್ಕೆ ಒಳಪಡಿಸುವುದರಿಂದ ಇಲ್ಲಿನ ಈ ಮೂವರು ಶಾಸಕರು ರಸ್ತೆಯ ಅಭಿವೃದ್ಧಿ ಕಾಮಗಾರಿ ಮಾಡಿಸುವಂತಹ ಪ್ರಯತ್ನ ಮಾಡಿಲ್ಲ. ಈ ಮೂವರು ಶಾಸಕರು ತಮ್ಮ ವ್ಯಾಪ್ತಿಗೆ ಈ ರಸ್ತೆಗಳು ಬರುವುದಿಲ್ಲ ಎಂದು ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ಸುಲಭದಲ್ಲಿ ಜಾರಿಕೊಳ್ಳುತ್ತಿದ್ದಾರೆ.

ಚಾಲಕರ ಹರಸಾಹಸ: 
ರಸ್ತೆಯಲ್ಲಿ ಬಿದ್ದಿರುವ ಆಳುದ್ದ ಗುಂಡಿಯಲ್ಲಿ ಸಂಚರಿಸಲು ವಾಹನಗಳು ಹರಸಾಹಸ ಪಡುತ್ತಿವೆ. ಚಾಲಕರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುವಂಥ ಪರಿಸ್ಥಿತಿ. ರಸ್ತೆಯಲ್ಲಿನ ಗುಂಡಿಯಲ್ಲಿ ಈಗ ಮಳೆಗಾಲ ಆಗಿರುವುದರಿಂದ ನೀರು ತುಂಬಿಕೊಂಡು ಗುಂಡಿಗಳು ಕಾಣದಾಗಿವೆ. ಇದು ಅಪಘಾತಗಳಿಗೆ ಅಹ್ವಾನ ನೀಡುತ್ತಿದೆ. ಕೆಲವೆಡೆ ಗುಂಡಿ ಮುಚ್ಚಲು ಹಾಕಿರುವ ಮಣ್ಣಿನಿಂದ ರಸ್ತೆ ಕೆಸರುಗದ್ದೆಯಾಗಿದೆ. ರಸ್ತೆಯಲ್ಲಿ ಪ್ರತಿ ನಿತ್ಯ ಸಂಚರಿಸುವ ವಾಹನ ಚಾಲಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆತರುವುದೆ ಕಷ್ಟ. ಹದಗೆಟ್ಟಿರುವ ರಸ್ತೆಯಲ್ಲಿ ಗರ್ಭಿಣಿಯವರು ಪ್ರಯಾಣಿಸಿದರೆ ಆಸ್ಪತ್ರೆ ಸೇರುವ ಮುನ್ನವೇ ರಸ್ತೆಯಲ್ಲಿ ಹೆರಿಗೆ ಆಗುವಂತಹ ಪರಿಸ್ಥಿತಿ ಇದೆ. ಇನ್ನೂ ಅನಾರೋಗ್ಯ ಪೀಡಿತರನ್ನು ಈ ರಸ್ತೆಗಳಲ್ಲಿ ಕರೆದುಕೊಂಡ ಹೋಗಲು ಸಾಧ್ಯವಾಗದೆ ಆಳುದ್ದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾವು-ಬದುಕಿನ ನಡೆಸುವೆ ಹೋರಾಟ ಮಾಡುವಂತಾಗಿದೆ, ಎಷ್ಟೋ ಜನ ಆಸ್ಪತ್ರೆ ಸೇರುವ ಮುನ್ನವೇ ಪ್ರಾಣವನ್ನು ಕಳೆದುಕೊಂಡಿದ್ದೂ ಉಂಟು.
ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರು ವನವಾಸ ಪಡುವಂತಾಗಿದೆ. ಅಷ್ಟೇ ಅಲ್ಲದೆ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ತಮ್ಮ ಸ್ಥಳಕ್ಕೆ ತಲುಪಲು ಪ್ರಯಾಣಿಕರಿಗೆ ಹಾಗೂ ರೋಗಿಗಳಿಗೆ ಸಾಧ್ಯವಾಗದೆ ಅನಾಹುತಗಳು ಸಂಭವಿಸುತ್ತಿವೆ. ಹಿಂದಿನ ಬಿಜೆಪಿ ಸರ್ಕಾರ ಸರಿಯಾಗಿ ಹಣವನ್ನು ಬಿಡುಗೆಡೆ ಮಾಡದೇ ವಿಳಂಬ ಮಾಡಿರುವುದು ಹಾಗೂ ರಾಜಕೀಯ ದ್ವೇಷದಿಂದ ಜಿಲ್ಲೆಯನ್ನು ಕಡೆಗಣಿಸಿದ ಪರಿಣಾಮವಾಗಿ ಸಾಕಷ್ಟು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿರುವುದರಿಂದ ರಸ್ತೆ ಸಂಚಾರ ಅಸಾಧ್ಯವಾಗಿದೆ.
ರಸ್ತೆ ಕಾಮಗಾರಿ ಗುತ್ತಿಗೆ ಪಡೆದಂತಹ ಕಂಪನಿ ರಸ್ತೆಯನ್ನು ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಅರ್ಧಭಾಗ ಹಾಗೆ ಬಿಟ್ಟಿರುವುದರಿಂದ ಗುಂಡಿಗಳು ದೊಡ್ಡದಾಗಿವೆ. ಉಸ್ತುವಾರಿ ಸಚಿವರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇನ್ನಾದರೂ ಸಬೂಬು ಹೇಳುವ ಬದಲು ಹಾಳಾಗಿರುವ ರಸ್ತೆ ಅಭಿವೃದ್ಧಿ ಕಡೆಗೆ ಮನಸ್ಸು ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement