ಸಂಘಟನೆ ಹೆಸರಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಲ್ಲ
ಕ.ಪ್ರ. ವಾರ್ತೆ ಬೇಲೂರು ಸೆ.2
ತಾವು ಸಂಘಟನೆಯ ಹೆಸರಿನಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವೆ ಎಂಬುದನ್ನು ಸಾಬೀತು ಪಡಿಸಿದಲ್ಲಿ ತಮ್ಮ ಎಲ್ಲಾ ರಾಜಕೀಯ ಹಾಗೂ ಸಂಘಟನೆಯ ಜೀವನಕ್ಕೆ ತಿಲಾಂಜಲಿ ನೀಡುವುದಾಗಿ ತಾಲೂಕು ಪ್ರಗತಿಪರ ಸಂಘಟನೆಗಳ ಗೌರವಾಧ್ಯಕ್ಷ ಕೆ.ಸುದರ್ಶನ್ ಸವಾಲು ಹಾಕಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಲೂರಿನ ಕೆಲ ಸಂಘಟನೆಗಳು ತಮ್ಮನ್ನು ಅಕ್ರಮ ಮತ್ತು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಸಾಬೀತು ಪಡಿಸಿದರೆ ತಾವು ಬೇಲೂರಿಗೆ ಗುಡ್ ಬೈ ಹೇಳುವುದಾಗಿ ಸುದರ್ಶನ್ ತಿಳಿಸಿದರು.
ತಾವು ಪ್ರಗತಿಪರ ಸಂಘಟನೆಯ ಹೆಸರು ಹೇಳಿಕೊಂಡು ಮರಳು ದಂದೆ, ವರ್ತಕರಿಂದ, ಸರ್ಕಾರಿ ನೌಕರರರಿಂದ ಹಣ ವಸೂಲಿ, ವರ್ಗಾವಣೆ ದಂದೆ, ಕಾರ್ಯಕ್ರಮಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವ ಒಂದೇ ಒಂದು ಪ್ರಕರಣವನ್ನು ಸಾಬೀತು ಪಡಿಸಿದರೆ ಆ ಕ್ಷಣದಲ್ಲೇ ತಾವು ತಮ್ಮ ಮಾತಿನಂತೆ ಎಲ್ಲವನ್ನೂ ಬಿಟ್ಟು ತಮ್ಮ ಪಾಡಿಗೆ ತಾವು ಇರುವುದಾಗಿ ಹೇಳಿದರು.
ಡಾ. ರಾಜಕುಮಾರ್ ಸಂಘಟನೆ, ತಾಲೂಕು ಕರವೇ, ಕಾವಲುಪಡೆ, ಶಿಲ್ಪಕಲಾ ಮಹಿಳಾ ಒಕ್ಕೂಟದವರು ತಾಲೂಕಿನಲ್ಲಿ ಯಾವ ಪ್ರಗತಿ ಪರ ಸಂಘಟನೆ ರಚನೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಪ್ರಗತಿಪರ ಸಂಘಟನೆಯ ಪ್ರತಿಭಟನೆಗೆ ಕರೆಯದೆ ಹೋದರೂ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದನ್ನು ಇವರು ಮರೆತಿರಬೇಕು.
ತಾವು ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ತಾಲೂಕಿನಲ್ಲಿ ಜೆಡಿಎಸ್ ಯುವ ಸಂಘಟನೆ ಮಾಡದೆ, ಪಕ್ಷ ಹೇಳಿದಂತೆ ಮಂಡ್ಯ ಹಾಗೂ ರಾಮನಗರದಲ್ಲಿ ಮಾತ್ರ ಪಕ್ಷ ಸಂಘಟನೆ ಮಾಡುತ್ತಿದ್ದೇನೆ.
ಆದರೆ ತೀರ್ಥಂಕರ್ ರಾಜಕೀಯದವರು ಸಂಘಟನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಇವರು ಮಾತ್ರ ಕಾಂಗ್ರೆಸ್ ಬಾವುಟವನ್ನು ಹೊದಿಕೆ ಮಾಡಿಕೊಂಡು ಪ್ರಚಾರ ಮಾಡುವ ಇವರು ಯಾವ ನೈತಿಕತೆಯಿಂದ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು. ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ ಯಗಚಿ ಜಲಾಶಯ ತುಂಬಿ ತಿಂಗಳು ಕಳೆದರೂ ಶಾಸಕ ಅಥವಾ ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಲಿಲ್ಲ. ಕಾರಣ ನಾವು ಕೆಲ ಸಂಘಟನೆಗಳ ಕಾರ್ಯಕರ್ತರು ಸೇರಿ ಬಾಗಿನ ಅರ್ಪಿಸಿದ್ದೇವೆ. ಕೆಲ ಸಂಘಟನೆಗಳು ಕಾಂಗ್ರೆಸ್ ಹಿಂಬಾಲಕರಾಗಿದ್ದು ಓಲೈಕೆ ಮಾಡಿಕೊಳ್ಳಲು ನಮ್ಮ ಮೇಲೆ ವೃಥಾ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು. ದಸಂಸ ಸಂಚಾಲಕ ಬಿ.ಎಲ್.ಲಕ್ಷ್ಮಣ್, ಭೋಗಮಲ್ಲೇಶ್ ಇದ್ದರು.