'ಸಹ ವಿದ್ಯಾರ್ಥಿಗೆ ತೊಂದರೆ ನೀಡಿದರೆ ಕಾನೂನು ಶಿಕ್ಷೆ'
ಅರಸೀಕೆರೆ: ನಿಮ್ಮೊಂದಿಗೆ ಕಲಿಯುತ್ತಿರುವ ಸಹ ವಿದ್ಯಾರ್ಥಿಗೆ ತೊಂದರೆ ನೀಡಿ ಶೋಷಣೆ ಮಾಡಿದಲ್ಲಿ ಕಾನೂನು ಶಿಕ್ಷೆಗೆ ಗುರಿಯಾಗುತ್ತೀರಿ. ಇದರಿಂದ ನಿಮ್ಮ ವಿದ್ಯಾರ್ಥಿ ಜೀವನ ಹಾಳಾಗುವುದಲ್ಲದೆ ನಿಮ್ಮ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿರುವ ಪೋಷಕರು ಕೂಡ ತೊಂದರೆ ಎದುರಿಸಬೇಕಾಗುತ್ತದೆ ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶೆ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಸರಸ್ವತಿ ವಿ ಕೋಸಂದರ್ ಎಚ್ಚರಿಕೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಶಿ ಇಲಾಖೆ ವತಿಯಿಂದ ಪಟ್ಟಣದ ಸಂತಮೇರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅದಕ್ಕಾಗಿ ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಕರೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆನಂದ್ ಮಾತನಾಡಿ, ಶಾಲಾ ಕಾಲೇಜುಗಳ ಮುಖ್ಯಸ್ಥರು ರ್ಯಾಗಿಂಗ್ ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಗಾರಗಳನ್ನು ಕಾಲಕಾಲಕ್ಕೆ ನಡೆಸಬೇಕು. ಈ ನಿಟ್ಟಿನಲ್ಲಿ ಪೋಷಕರ, ಶಾಲಾಭಿವೃದ್ಧಿ ಸಮಿತಿಗಳ ಸಭೆ ಕರೆದು ವಿಚಾರ ವಿನಿಮಯ ನಡೆಸಬೇಕು ಎಂದು ಸಲಹೆ ನೀಡಿದರು. ನ್ಯಾ. ಚನ್ನಪ್ಪ ಕುರುಬೆಟ್ ಮಾತನಾಡಿದರು. ಸಂತಮೇರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಯ್ಲೆಟ್ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಸರ್ವೇಶ್, ಕಾರ್ಯದರ್ಶಿ ಓ.ಎ.ಶಿವಕುಮಾರ್, ಸರ್ಕಾರಿ ವಕೀಲರಾದ ಕೃಷ್ಣ ಜಿ ದೇಶಭಂಡಾರಿ, ಇದ್ದರು.