ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನೈರ್ಮಲ್ಯ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

Rashmi Kasaragodu
Updated On : 4 Sept 2013, 12:39 pm

ಹಾಸನ: ಓಮ್ನಿಕಾನ್ ಅರ್ತ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಂಜಿ ರಿಕ್ಲೆಮೇಷನ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಿಂದ ಹೊರ ಬರುತ್ತಿರುವ ತ್ಯಾಜ್ಯ ವಸ್ತು ಮತ್ತು ದುರ್ವಾಸನೆ ಖಂಡಿಸಿ ನಗರದ ಹೊರವಲಯದ ಸುತ್ತಮುತ್ತಲಿನ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಇರುವ ಓಮ್ನಿಕಾನ್ ಅರ್ತ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಂಜಿ ರಿಕ್ಲೆಮೇಷನ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿ ಎದುರು ಗ್ರಾಮಸ್ಥರು, ಶಾಲೆಯ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸುತ್ತಮುತ್ತಲ ಗ್ರಾಮಗಳಿಗೆ ತೊಂದರೆ: ನಗರದ ಕೈಗಾರಿಕಾ ಪ್ರದೇಶದಲ್ಲಿ ಇರುವ ಓಮ್ನಿಕಾನ್ ಅರ್ತ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಕರಣಾ ಘಟಕವು ಒಂದು ವರ್ಷದ ಹಿಂದೆ ಸ್ಥಾಪನೆಗೊಂಡು ಚೆಂಡು ಹೂವನ್ನು ಕೊಳೆಯಿಸಿ ರಸಾಯನಿಕ ತಯಾರು ಮಾಡುತ್ತಿದ್ದು ಮತ್ತು ಎಂಜಿ ರಿಕ್ಲೆಮೇಷನ್ ಕಂಪನಿಯು ಹಳೇ ಟೈರ್ಗಳನ್ನು ಸುಟ್ಟು ಅದರಿಂದ ರಸಾಯನಿಕ ಪುಡಿ ತಯಾರು ಮಾಡುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆರೋಗ್ಯ ಸ್ಥಿತಿ ಅಧೋಗತಿ: ಸುತ್ತಮುತ್ತಲ ಗ್ರಾಮಗಳಾದ ಸಮುದ್ರವಳ್ಳಿ, ನಾಗತಹಳ್ಳಿ, ಕೌಶಿಕ, ಸಾತೇನಹಳ್ಳಿ, ಕಂಚನಹಳ್ಳಿ, ಕಂಚನಹಳ್ಳಿ ಕೊಪ್ಪಲು, ಶ್ರೀರಾಮನಗರ ಸೇರಿದಂತೆ ಇತರೆ ಗ್ರಾಮಗಳಿಗೆ ಹಾಗೂ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ಚೆಂಡು ಹೂವಿನ ಕೊಳೆತದ ದುರ್ವಾಸನೆ ಹಾಗೂ ಟೈರ್ ಫ್ಯಾಕ್ಟರಿಯಿಂದ ಬರುತ್ತಿರುವ ಹೊಗೆ, ದುರ್ವಾಸನೆಯಿಂದ ಕಳೆದ ಒಂದು ವರ್ಷದಿಂದ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ದೂರಿದರು.
ಜಲಚರಗಳಿಗೂ ಹಾನಿ: ಕೈಗಾರಿಕ ಪ್ರದೇಶದಲ್ಲಿರುವ ಚೆಂಡು ಹೂವು ಸಂಸ್ಕರಣಾ ಘಟಕದ ಕಾರ್ಖಾನೆಯಿಂದ ಹೊರ ಬರುವ ಕೊಳೆತ ರಸಾಯನಿಕ ನೀರು ಕೆರೆ ಸೇರಿ ಜಲಚರಗಳು ಸಾವನ್ನಪ್ಪುತ್ತಿವೆ. ಜೊತೆಗೆ ಹೂವಿನ ದುರ್ವಾಸನೆ ಸುತ್ತ ಮುತ್ತಲಿನ ಜಾನುವಾರು ಹಾಗೂ ಜನರು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅಲವತ್ತುಕೊಂಡರು.
ಕಾರ್ಖಾನೆ ವಿಷಾನಿಲದಿಂದಾಗಿ ಈ ಪ್ರದೇಶದಲ್ಲಿರುವ ಗಿಡ ಮರಗಳು ಒಣಗುತ್ತಿವೆ. ಕಾರ್ಖಾನೆ ಸಾರ್ವಜನಿಕ ರಸ್ತೆ ಬಳಸಿಕೊಳ್ಳುತ್ತಿದೆ. ಇದರಿಂದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಗಾಳಿ ಇಲ್ಲದೆ ವಿಷಕಾರಿ ಅನಿಲವನ್ನು ಸೇವಿಸುವಂತಾಗಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದುಬಸ್ ಮಾಡಲಾಗಿತ್ತು. ಪೊಲೀಸರು ಬಿಗುವಿನ ವಾತವರಣ ತಿಳಿಗೊಳಿಸಿದರು.
ಗ್ರಾಮಸ್ಥರಾದ ಮಧು, ಚನ್ನೇಗೌಡ, ಗಿಡ್ಡೇಗೌಡ, ಕುಮಾರ್, ಯೋಗಿಶ್, ಸಂತೋಷ್, ನಾಗರಾಜ್, ಶಿವಣ್ಣ, ಸ್ವಾಮಿ, ಅಶೋಕ್, ಸುರೇಶ್, ಮಂಜುನಾಥ್, ರಾಜು, ಕೌಶಿಕ ಗಿರೀಶ್, ಪ್ರವೀಣ್, ಸುರೇಶ್, ಗೌರಮ್ಮ, ಮಂಜುಳ, ಸಿದ್ದಮ್ಮ, ಪಾರ್ವತಿ, ಕುಮಾರಿ, ಸರೋಜ, ಪಲ್ಲವಿ, ರೂಪ, ಸುಂದರಮ್ಮ ಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement