ಅರಕಲಗೂಡು; ಮಳೆ-ಗಾಳಿಗೆ ಅಪಾರ ಹಾನಿ
ಅರಕಲಗೂಡು: ತಾಲೂಕಿನ ಕಸಬಾ ಹೋಬಳಿಯ ಗರೀಘಟ್ಟ ಗ್ರಾಮದಲ್ಲಿ ಸೋಮವಾರ ಸಂಜೆ ವೇಳೆಗೆ ಬೀಸಿದ ಭಾರೀ ಗಾಳಿಗೆ ಅಪಾರ ಹಾನಿ ಸಂಭವಿಸಿದೆ. ಗರೀಘಟ್ಟ ಗ್ರಾಮದಲ್ಲಿ ಸುಮಾರು 70 ವಿವಿಧ ರೀತಿಯ ಮರಗಳು ನೆಲಕ್ಕುರುಳಿದ್ದು, ಕೆಲ ಮರಗಳು ವಾಸದ ಮನೆಗಳ ಮೇಲೆ ಬಿದ್ದುದರಿಂದ ಹಲವು ಮನೆಗಳು ಜಖಂಗೊಂಡಿವೆ.
ಬತ್ತ, ರಾಗಿ ಕಣಜಗಳಿಗೆ ನೀರು: ಕೆಲ ಮನೆಗಳ ಛಾವಣಿ ಭಾಗಶಃ ಹಾರಿ ಹೋಗಿದ್ದರೆ, ಗ್ರಾಮದ ಮೂರು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಇದೇ ವೇಳೆ ಸುರಿದ ಭಾರೀ ಮಳೆಯಿಂದಾಗಿ ಕೆಲ ಮನೆಗಳಲ್ಲಿ ಕಣಜಗಳಲ್ಲಿ ಸಂಗ್ರಹಿಸಿಡಲಾಗಿದ್ದ ಬತ್ತ ಹಾಗೂ ರಾಗಿ ನೀರಿನಿಂದ ತುಂಬಿಹೋಗಿದ್ದು, ಸಂಗ್ರಹಿಸಿದ್ದ ಧಾನ್ಯಗಳು ಸಂಪೂರ್ಣ ಹಾನಿಗೊಂಡಿವೆ. ಇನ್ನು ತೋಟಗಳಲ್ಲಿದ್ದ ಅಡಕೆ ಮರಗಳು, ಹಲಸಿನ ಮರ ಸೇರಿದಂತೆ ಮತ್ತಿತರೆ ಮರಗಳು ನೆಲಕ್ಕುರಳಿವೆ. ಭಾರೀ ಗಾಳಿಗೆ ಸಿಲುಕಿದ ಜೋಳದ ಬೆಳೆ ಸಂಪೂರ್ಣ ನೆಲಕ್ಕೆ ಮಲಗಿವೆ.