ಆಚಾರ-ವಿಚಾರದಿಂದ ಉನ್ನತ ಸಾಧನೆ ಸಾಧ್ಯ
ಕ.ಪ್ರ.ವಾರ್ತೆ ಆಲೂರು ಸೆ. 3
ಕನ್ನಡ ಮತ್ತು ಸಂಸ್ಕತಿ ಇಲಾಖೆ, ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾ ಸಂಘದ ಆಶ್ರಯದಲ್ಲಿ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಾಟಕ ಪರಂಪರೆ ಕುರಿತಂತೆ ವಿಚಾರ ಸಂಕಿರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆಲೂರು ತಾಪಂ ಅಧ್ಯಕ್ಷೆ ಯಶೋಧ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಹಕಾರಿಯಾಗುತ್ತವೆ ಎಂದರು.
ಮಗ್ಗೆ ಕ್ಷೇತ್ರದ ತಾಪಂ ಸದಸ್ಯ ಕೆ.ಎನ್.ಕಾಂತರಾಜ್ ಮಾತನಾಡಿ, ಎಲ್ಲಾ ಉತ್ತಮ ವಿಚಾರಗಳನ್ನು ಅರಿತುಕೊಂಡು ಮೈಗೂಡಿಸಿಕೊಂಡರೆ ಉನ್ನತ್ತಿಗೇರಲು ಸಾಧ್ಯ. ನಾಟಕ ಕಲಿತು ಪ್ರದರ್ಶಿಸುವಲ್ಲಿ ಮತ್ತು ನಮ್ಮ ನಾಡಿನ ಸಂಸ್ಕತಿ ಉಳಿಸಿಕೊಳ್ಳುವಲ್ಲಿ ಕಲಾವಿದರು ತಮ್ಮ ಪ್ರತಿಬೆಯನ್ನು ಹೊರಹಾಕಲು ನಾಟಕ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾಟಕ ಪರಂಪರೆ ವಿಷಯವಾಗಿ ಉಪನ್ಯಾಸ ನೀಡಿದ ಸಾಹಿತಿ ಗೊರೂರು ಅನಂತರಾಜು, ನಾಟಕವು ಎಲ್ಲ ಕಲೆಗಳ ರಸಸ್ವಾದ ಆಸ್ವಾದಿಸಿ ತನ್ನ ರಸರಮಣೀಯತೆಯಿಂದ ಭಾವನ ಪ್ರಪಂಚವನ್ನು ಸೃಷ್ಟಿಸುವ ಚೇತನ ರಂಗಭೂಮಿಗಿದೆ ಎಂದರು.
ನಾಟಕ ನಾಟ್ಯದ ಬೆಳೆದ ರೂಪ. ಕುಣಿತ ಮಾನವನ ಸ್ವಭಾವ ಸಿದ್ಧಗುಣ. ಲಯಬದ್ಧವಾದ ವ್ಯವಸ್ಥಿತ ಕುಣಿತ ನರ್ತನ ವಲಯಕ್ಕೆ ಸೇರುತ್ತದೆ. ನಾಟ್ಯವು ನೃತ್ಯ ಮತ್ತು ಅಭಿನಯಗಳೆರಡನ್ನೂ ಒಳಗೊಂಡಿತ್ತು ಎನ್ನುವಾಗ ನಾಟಕದ ಪ್ರಾಥಮಿಕ ಲಕ್ಷಣದ ಅರಿವಾಗುತ್ತದೆ. ಕಥೆಯನ್ನು ಕಾರ್ಯರೂಪದಲ್ಲಿ ಅನುಕರಣ ಮಾಡತಕ್ಕದ್ದು ಗ್ರೀಕ್ ರುದ್ರ ನಾಟಕವಾಯಿತು ಎಂದಿದ್ದಾನೆ ಅರಿಸ್ತಾಟಲ್. ಭರತ ಇದನ್ನು ಲೋಕ ವೃತ್ತದ ಅನುಕರಣೆ ಎಂದಿದ್ದಾನೆ. ನಾಟಕವು ಲೋಕದ ಅಥವಾ ಜನರ ಅವಸ್ಥೆಗಳ ಅನುಕರಣೆ ಎಂಬುದು ಇದರಿಂದ ಅರಿಯಬಹುದಾಗಿದೆ ಎಂದು ವಿಮರ್ಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮೂತ್ರ್ಯಪ್ಪ, ಮುಖ್ಯೋಪಾಧ್ಯಾಯ ಹೆಚ್.ಎಸ್.ಧಮ್ಮಪ್ಪ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಬಿ.ಮಂಜುನಾಥ್, ಶಿಕ್ಷಕ ಎಂ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. ಮಗ್ಗೆ ಗ್ರಾಪಂ ಅಧ್ಯಕ್ಷ ಪರಮಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಇದೆ ವೇಳೆ ಕಲಾವಿದರಾದ ವೈ.ಮಂಜುನಾಥ್, ಗೋವಿಂದೇಗೌಡ, ಎಸ್.ಯು.ಶ್ರೀಧರ್, ಡಿ.ವಾಸುದೇವ್, ಕೆ.ರಾಜು, ಡಿಸೋಜ, ಸಚಿನ್ ಎನ್.ಎಂ., ವೇದಾವತಿ, ಯೋಗೇಶ್ ಮತ್ತು ಎ.ಸಿ.ರಾಜು ರಂಗಗೀತೆಗಳನ್ನು ಹಾಡಿ ರಂಜಿಸಿದರು.
ಚಾಮುಂಡೇಶ್ವರಿ ಜಾನಪದ ಮತ್ತು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ಎ.ಸಿ.ರಾಜು ಸ್ವಾಗತಿಸಿದರು. ಶಿಕ್ಷಕ ಹೆಚ್.ಕೆ.ಮಂಜುನಾಥ್ ವಂದಿಸಿದರು.