ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೆಲೆ ಏರಿಕೆ, ರು. ಕುಸಿತ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 4 Sept 2013, 12:39 pm

ಹಾಸನ: ಕೇಂದ್ರದ ಯುಪಿಎ ಸರ್ಕಾರದ ಅಸಮರ್ಪಕ ನೀತಿಯಿಂದ ವಿದೇಶಿ ಕರೆನ್ಸಿ ಮುಂದೆ ರುಪಾಯಿ ಮೌಲ್ಯ ಕುಸಿತ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಎನ್.ಆರ್. ವೃತ್ತದಿಂದ ಪ್ರತಿಭಟನೆ ಪ್ರಾರಂಭವಿಸಿ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ
ಕೇಂದ್ರದ ಯುಪಿಎ ಸರ್ಕಾರ ನಿರಂತರವಾಗಿ ಡಿಸೇಲ್, ಪೆಟ್ರೋಲ್ ಹಾಗೂ ಗ್ಯಾಸ್ ಸಿಲೆಂಡರ್ ಬೆಲೆಗಳನ್ನು ಏರಿಸುವುದರ ಮೂಲಕ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಯುಪಿಎ ಸರ್ಕಾರದ ಅಸಮರ್ಪಕ ನೀತಿಗಳಿಂದ ಡಾಲರ್ ಬೆಲೆಯೆದುರು ರುಪಾಯಿ ಮೌಲ್ಯ ಅಪಮೌಲ್ಯ ಆಗುತ್ತಿರುವುದರಿಂದ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬು ಹೇಳುವ ಮೂಲಕ ಕೇಂದ್ರ ಸರ್ಕಾರ ರುಪಾಯಿ ಮೌಲ್ಯ ಕುಸಿತದ ತಡೆಗೆ ಅಗತ್ಯವಾದ ಸುಧಾರಣಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಬೆಲೆಯೇರಿಕೆ: ಪ್ರಧಾನಿ ಮನಮೋಹನ್ಸಿಂಗ್ ಮತ್ತು ಸಚಿವ ಪಿ.ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಯುಪಿಎ ಸರ್ಕಾರ ಪೆಟ್ರೋಲ್ ಬೆಲೆಯನ್ನು ಆರು ಬಾರಿ ಏರಿಸಿದೆ. ಜನವರಿಯಿಂದ ಡಿಸೇಲ್ ದರವನ್ನು 8 ಬಾರಿ ಏರಿಸಿದೆ. ಇದರಿಂದ ದಿನ ನಿತ್ಯದ ವಸ್ತುಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಅಲ್ಲದೆ ಪ್ರಯಾಣ ದರ ಹೆಚ್ಚಳವಾಗಿದೆ. ಹಣದುಬ್ಬರ ಇವೆಲ್ಲದರ ನಡುವೆ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟಕರ ವಾತಾವರಣ ನಿರ್ಮಾಣವಾಗಿದೆ. ಕೇಂದ್ರದ ತಪ್ಪು ಆರ್ಥಿಕ-ನೀತಿಗಳ ಪರಿಣಾಮವನ್ನು ಜನರು ಅನುಭವಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ಕಠಿಣ ಕ್ರಮ  ಕೈಗೊಳ್ಳಬೇಕು: ಹಗರಣ, ಭ್ರಷ್ಟಚಾರಗಳಲ್ಲಿ ಮುಳುಗಿರುವ ಕೇಂದ್ರದ ನಾಯಕರು ಜನಸಾಮಾನ್ಯರ ಈ ಬವಣೆಯನ್ನು ಅರಿಯುವಲ್ಲಿ ಸಂಪೂರ್ಣವಾಗಿ ಎಡವಿದೆ. ಇಂತಹ ಜನ ವಿರೋಧಿ ಸರ್ಕಾರ ಅಧಿಕಾರದಲ್ಲಿರಲು ಅನರ್ಹವಾಗಿದೆ. ಜನ ಸಾಮಾನ್ಯರ ಹಿತಕಾಯದ ಆಡಳಿತ ಎಲ್ಲರನ್ನು ಕಷ್ಟಕ್ಕೆ ತಳ್ಳಿದೆ. ಈ ಕೂಡಲೇ ಸರ್ಕಾರ ಅಗತ್ಯವಾದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ನಗರಾಧ್ಯಕ್ಷ ಎನ್. ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ನಗರಸಭಾ ಮಾಜಿ ಸದಸ್ಯ ಡಿ. ಪ್ರಸನ್ನಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕೃಷ್ಣೇಗೌಡ, ನಾಗೇಶ್, ಚನ್ನಕೇಶವ, ಪ್ರಶಾಂತ್, ರವಿ, ಉದಯಕುಮಾರ್, ಶೋಭ ಶುಭಕರ್, ಮನೋಹರ್, ಶಾಂತಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವ  ವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement