ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಸಂಭ್ರಮ
ಅರಸೀಕೆರೆ: ತಾಲೂಕಿನ ಚೆಲ್ಲಾಪುರ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಸೋಮವಾರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಯಾದಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆಗಳಾದ ಕರಿಯಮ್ಮ ಮತ್ತು ಹುಲಿಯಮ್ಮ ದೇವಿಗೆ ಮಹಾಮಂಗಳಾರತಿ ನಾನಾ ವಿಧದ ಪೂಜೆ ಅಭಿಷೇಕ, ರುದ್ರಾಭಿಷೇಕ, ಇನ್ನಿತರ ಪೂಜಾ ಕಾರ್ಯಗಳು ನೆರವೇರಿದವು. ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕೈಂಕರ್ಯದಲ್ಲಿ ಪಾಲ್ಗೊಂಡರು. ಸೋಮವಾರ ರಾತ್ರಿ 9 ಕ್ಕೆ ಮಲ್ಲಿಕಾರ್ಜುನ ಸ್ವಾಮಿ, ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕರಿಯಮ್ಮ ದೇವಿಯವರ ಬೆಳ್ಳಿ ಪಲ್ಲಕ್ಕಿ ಮಹೋತ್ಸವ, 11ಕ್ಕೆ ಬಸವ ವಾಹನೋತ್ಸವ ಮತ್ತು ಮುತ್ತಿನ ವಾಹನೋತ್ಸವ ಮಧ್ಯೆ ರಾತ್ರಿಯಲ್ಲಿ ಬಿಲ್ವಪತ್ರೆ ವಾಹನೋತ್ಸವ, ಸೂರ್ಯಮಂಡಲೋತ್ಸವ ಜರುಗಿದವು.
ಮಂಗಳವಾರ ಬೆಳಗಿನ ಜಾವ 4ಕ್ಕೆ ಚಂದ್ರಮಂಡಲೋತ್ಸವ ಮತ್ತು ಕೆಂಡ ಸೇವೆಯ ನಂತರ ದೇವಾಲಯದಲ್ಲಿ ಎಲ್ಲಾ ದೇವರನ್ನು ರಥಕ್ಕೆ ಕುಳ್ಳರಿಸಿ ರಥೋತ್ಸವ ನೆರೆವೇರಿಸಲಾಯಿತು.ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಇದೆ ವೇಳೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಥೊತ್ಸವದ ಅಂಗವಾಗಿ ಇಡೀ ಗ್ರಾಮ ತಳಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು.
ವೀರಭದ್ರನ ಕುಣಿತ, ಚೋಮನ ಕುಣಿತ, ನಂದಿಧ್ವಜ ಮೆರವಣಿಗೆ ನೋಡುಗರನ್ನು ಬೆರಗುಗೊಳಿಸುವಂತಿತ್ತು. ಚುನಾಯಿತ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.