ಸರ್ಕಾರಿ ಪಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಸಕಲೇಶಪುರ: ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಾಲಿಬಾಲ್, ಥ್ರೋಬಾಲ್, ಕಬ್ಬಡಿ ಮತ್ತು ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಕಾಲೇಜಿಗೆ ಸಮಗ್ರ ಪಶಸ್ತಿ ಲಭಿಸಿದೆ.
ಕಾಲೇಜಿನ ಬಾಲಕರ ವಿಭಾಗದ ಕ್ರೀಡಾಕೂಟದ 5000 ಮೀಟರ್ ಓಟದಲ್ಲಿ ಸಂದೀಪ ಪ್ರಥಮ ಹಾಗೂ ಗುರುರಾಜ್ ದ್ವಿತೀಯ ಹಾಗೂ 3000 ಮೀಟರ್ ಓಟದಲ್ಲಿ ಪ್ರಥಮ ಹಾಗೂ 1500 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನವನ್ನು ಭರತ್ ಪಡೆದಿದ್ದಾರೆ. ಆಸೀಫ್ ಗುಂಡು ಎಸೆತ ಹಾಗೂ ಜಾವಲಿನ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ವಿದ್ಯಾರ್ಥಿನಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರೆ, ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಾ ಗುಂಡು ಎಸತೆ, ಡಿಸ್ಕಸ್ ಥ್ರೋ ಹಾಗೂ ಜಾವಲಿನ ಎಸೆತದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.