ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾನೂನು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

Rashmi Kasaragodu
Updated On : 4 Sept 2013, 11:59 am

ಕ.ಪ್ರ.ವಾರ್ತೆ   ಹಾಸನ   ಸೆ. 4
ನೂತನವಾಗಿ ನಿರ್ಮಿಸಿರುವ ಸರ್ಕಾರಿ ಕಾನೂನು ಕಾಲೇಜು ಕಟ್ಟಡದಲ್ಲಿಯೇ ತರಗತಿಗಳನ್ನು ನಡೆಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಕಾನೂನು ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ನಿರ್ಮಿಸಿರುವ ನೂತನ ಕಾಲೇಜು ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಾನೂನು ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಇದುವರೆಗೂ ತರಗತಿಗಳು ನಡೆಯುತ್ತಿದ್ದು, ಕಳೆದ 5 ವರ್ಷದಿಂದ ಸರ್ಕಾರಿ ಕಾನೂನು ಕಾಲೇಜಿನ ಸ್ವಂತ ಕಟ್ಟಡದ ಕಾಮಗಾರಿ ನಡೆದು ಇದೀಗ ಮುಕ್ತಾಯಗೊಂಡಿದೆ. ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವಿದ್ದರೂ, ಈಗಿರುವ ಖಾಸಗಿ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ವಿಶಾಲವಾದ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸಮಸ್ಯೆಗಳಿವೆ ಎಂದು ಆರೋಪಿಸಿದರು.
ಅಲ್ಲದೇ ಖಾಸಗಿ ಕಟ್ಟಡ ರಸ್ತೆ ಪಕ್ಕದಲ್ಲಿ ಇರುವುದರಿಂದ ವಾಹನಗಳ ಶಬ್ಧ ಹೆಚ್ಚಾಗಿದ್ದು, ಜೊತೆಗೆ ಪಕ್ಕದಲ್ಲೇ ಮಾಂಸಹಾರಿ ಹೋಟೆಲ್ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹಾಗೂ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ದೂರಿದರು.
ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಬದಲಾವಣೆಯಾಗಿಲ್ಲ. ಕೂಡಲೇ ನೂತನ ಕಟ್ಟಡದಲ್ಲಿಯೇ ತರಗತಿಗಳು ಪ್ರಾರಂಭವಾಗಬೇಕು ಹಾಗೂ ಕಾಲೇಜಿಗೆ ತೆರಳಲು ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ವೇದಿಕೆಯ ಸಂಚಾಲಕ ಎಚ್.ಇ.ಅನ್ಷಾದ್, ಎಚ್.ಯು.ವಚನ್, ಮಖಂಡರಾದ ವಿಜಯೇಂದ್ರ, ಮಹೇಶ್, ಕಲಾ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement