ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಧರಣಿ

Rashmi Kasaragodu
Updated On : 5 Sept 2013, 12:00 pm

ಕ.ಪ್ರ.ವಾರ್ತೆ   ಹಾಸನ   ಸೆ. 4
ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭಾರತೀಯ ಪಶುವೈದ್ಯಕೀಯ ಮಂಡಳಿ ಮಾನ್ಯತೆ ನೀಡುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಕಪ್ಪು ಪಟ್ಟಿ ಧರಿಸಿ, ಉಪನ್ಯಾಸಕರು ಹಾಗೂ ಸಿಬ್ಬಂದಿಯನ್ನು ತಡೆದು ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ಸಿಬ್ಬಂದಿ ಕಾಲೇಜಿನ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಡ್ಡಮಲಗಿ ತಮ್ಮ ಮೇಲೆ ಹಾದು ಹೋಗುವಂತೆ ಪಟ್ಟು ಹಿಡಿದರು.
ಪ್ರಾರಂಭವಾದ 7 ವರ್ಷಗಳಲ್ಲಿ ಅಭಿವೃದ್ಧಿ ಕಂಡಿಲ್ಲ:  ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯ ರಾಜ್ಯ ಸರ್ಕಾರದ ಅನುಮತಿಯಂತೆ 2007ರಲ್ಲಿ  ಆರಂಭಗೊಂಡಿದ್ದು, ಕಳೆದ 7 ವರ್ಷಗಳಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಮಂದಗತಿಯ ಬೆಳವಣಿಗೆಯಿಂದಾಗಿ ಮಹಾವಿದ್ಯಾಲಯ ಭಾರತ ಸರ್ಕಾರದ ಪಶು ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆಯುವಲ್ಲಿಯೂ ವಿಫಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಳಿಯ ಸತತ ಎಚ್ಚರಿಕೆ ನಂತರವೂ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯ ಮಂಡಳಿ ನಿಗದಿಪಡಿಸಿರುವ ಮಾನದಂಡಗಳನ್ನು ತಲುಪದಿದ್ದ ಕಾರಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆವಿಸಿ ನೋಂದಣಿ ಪಡೆಯುವದರಿಂದ ವಂಚಿತರಾಗಿದ್ದಾರೆ.
ಅಷ್ಟೇ ಅಲ್ಲದೆ ಪ್ರಸ್ತುತ ಕಾಲೇಜಿನಲ್ಲಿ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಪ್ರಮಾಣ ಪತ್ರ ಲಭ್ಯವಾಗದ ಕಾರಣ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವಂತೆ ದೂರಿದರು.
ರೇಷ್ಮೆ ಇಲಾಖೆ ಕಟ್ಟಡದಲ್ಲಿ ಕಾಲೇಜು:  2009-10ನೇ ಸಾಲಿನಲ್ಲಿ ಪಶುವೈದ್ಯಕೀಯ ಮಂಡಳಿ ಸದಸ್ಯರು ವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ರೇಷ್ಮೆ ಇಲಾಖೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಪರಿಸ್ಥಿತಿ ಕಂಡು ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲದಿರುವ ಕಾರಣದಿಂದ ಮಾನ್ಯತೆ ನೀಡಿಲ್ಲ. ಈಗಾಗಲೇ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೆವಿಸಿ ನೋಂದಣಿ ಪ್ರಮಾಣ ಪತ್ರ ನೀಡಿಲ್ಲ. ಮುಂದೆ ಪಾಸಾಗುವವರಿಗೂ ಪ್ರಮಾಣ ಪತ್ರ ಸಿಗುತ್ತದೆ ಎನ್ನುವ ಖಾತ್ರಿಯೂ ಇಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದರು. ಮಹಾವಿದ್ಯಾಲಯದ ಪ್ರಥಮ ತಂಡದ ವಿದ್ಯಾರ್ಥಿಗಳು ತಮ್ಮ 5 ವರ್ಷ ಪದವಿಯನ್ನು ರೇಷ್ಮೆ ಇಲಾಖೆಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಕಟ್ಟಡಗಳಲ್ಲೆ ಮುಗಿಸಿದ್ದಾರೆ. ಮಾನ್ಯತೆ ಇಲ್ಲದ ಕಾರಣ ಕೆವಿಸಿ ನೋಂದಣಿ ಪಡೆಯುವಲ್ಲಿ ವಿಫಲವಾಗಿದ್ದು, ಹಾಸನದ ಪಶುವೈದ್ಯರು ಆತಂತ್ರ ಸ್ಥಿತಿಯಲ್ಲಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ಪಡೆಯುವಲ್ಲಿ ಹಾಗೂ ಮಿಲಿಟರಿಗೆ ಸೇರಲು ಅನರ್ಹರಾಗಿದ್ದಾರೆ. ಸತತ 5 ವರ್ಷದ  ವಿದ್ಯಾಭ್ಯಾಸ ಹಾಗೂ ಪರಿಶ್ರಮ ಅನುಪಯುಕ್ತವಾಗಿದೆ ಎಂದು ಅಲವತ್ತುಕೊಂಡರು.
ಭವಿಷ್ಯದ ಬಗ್ಗೆ ಚಿಂತಾಕ್ರಾಂತ: ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮತ್ತು ಸರ್ಕಾರವನ್ನು ನಂಬಿ ಈ ಮಹಾವಿದ್ಯಾಲಯಕ್ಕೆ ಸೇರಿದ್ದು, ನಮಗೆ ಪ್ರವೇಶ ಪ್ರಕ್ರಿಯೆ ವೇಳೆ ಯಾವುದೇ ಸೂಚನೆಯಾಗಲಿ, ಮುಂದೆ ಎದುರಾಗುವ ತೊಂದರೆಗಳ ಬಗ್ಗೆಯಾಗಲಿ ತಿಳಿಸಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆಂದರು.
 ಅಲ್ಲದೆ ಹಲವು ವಿದ್ಯಾರ್ಥಿಗಳು ಬ್ಯಾಂಕ್ಗಳಿಂದ ಸಾಲ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಪಶುವೈದ್ಯಕೀಯ ವೃತ್ತಿಪರ ಕೋರ್ಸ್ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದಿದ್ದಾರೆ. ಆದರೆ ಕೆವಿಸಿ ಮಾನ್ಯತೆ ಪಡೆಯದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ದೂರಿದರು.
ಪಶುವೈದ್ಯ ಪರಿಷತ್ತಿನ ಆಣತಿಯಂತೆ ಒಂದು ಕಾಲೇಜಿನಲ್ಲಿ 96 ಬೋಧಕ ಹಾಗೂ 160 ಬೋಧಕೇತರ ಸಿಬ್ಬಂದಿ ಇರಲೇಬೇಕು. 4 ವರ್ಷಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯೇ 256 ಇರಬೇಕು ಎಂಬ ನಿಯಮವಿದೆ. ಆದರೆ ಪ್ರಸ್ತುತ ಕಾಲೇಜಿನಲ್ಲಿ 180 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೇ ಕಾಲೇಜಿಗೆ ಅಗತ್ಯವಾಗಿ ಬೇಕಾದಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಇದರಿಂದ ಭಾರತೀಯ ಪಶು ವೈದ್ಯ ಪರಿಷತ್ ಮಾನ್ಯತೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ವಿದ್ಯಾರ್ಥಿಗಳ ಸಮಸ್ಯೆಗಳು ಬಗೆಹರಿದಿಲ್ಲ. ಇನ್ನಾದರೂ ಸಂಬಂಧಪಟ್ಟವರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪ್ರಮೋದ್, ನಿತಿನ್, ಕೋಟ್ರೇಶ್, ಮಾರುತಿ, ರಮೇಶ್, ಚೇತನ್, ಕಿರಣ್, ಮಂಜುನಾಥ್, ಸಂತೋಷ್, ಮೋಹನ್, ಪ್ರವೀಣಕುಮಾರ್, ರೋಹಿತ್, ಭೂತೇಶ್, ನವೀನ್, ರವಿಕುಮಾರ್, ಸುರೇಶ್, ಹಿತೈಶಿಣಿ, ರಮ್ಯ, ಕಾವ್ಯ, ಪೂರ್ಣಿಮಾ, ಪಲ್ಲವಿ, ಸಂಧ್ಯಾ, ಸೌಮ್ಯ ಇತರರು ಇದ್ದರು.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ಬಗ್ಗೆ ಈಗಾಗಲೇ ವಿಶ್ವವಿದ್ಯಾಲಯದ ಕುಲಪತಿಗಳಿಗೆ ವಿಷಯ ತಿಳಿಸಿದ್ದೇನೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸಚಿವರಿಗೂ ವಿಷಯ ತಿಳಿಸಲಾಗಿದೆ
ಟಿ ನರಸಿಂಹಮೂರ್ತಿ,  ಹಾಸನ ಪಶವೈದ್ಯಕೀಯ ಮಹಾವಿದ್ಯಾಲಯ ಡೀನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement