ಶಾಸಕರ ಬಗ್ಗೆ ಹಗುರ ಮಾತು ಸಲ್ಲ: ಮುಖಂಡರ ಎಚ್ಚರಿಕೆ
ಹೊಳೆನರಸೀಪುರ: ಕಾಂಗ್ರೆಸ್ ನಾಯಕಿ ಅನುಪಮ ಅವರ ಸೋಲಿಗೆ ಶಾಸಕ ಎ.ಮಂಜು ಅವರೇ ಕಾರಣ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ಸಿಗರು ಎನಿಸಿಕೊಂಡಿರುವ ಕೆಲವರು, ದೊಡ್ಡವರ ಬಗ್ಗೆ ಟೀಕಿಸಿದಲ್ಲಿ ತಾವೂ ದೊಡ್ಡವರಾಗುತ್ತೇವೆ ಎಂಬ ಭ್ರಮೆಯನ್ನು ಬಿಟ್ಟು ಶಾಸಕರ ಬಗೆ ಹಗುರವಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಲಿ ಎಂದು ಇಲ್ಲಿನ ಕೆಲ ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದಾರೆ.
ತಾಲೂಕಿನ ಹಳ್ಳಿಮೈಸೂರಿನಲ್ಲಿ ತಾಪಂ ಮಾಜಿ ಅಧ್ಯಕ್ಷ ಎ.ಡಿ.ಚಂದ್ರಶೇಖರ್, ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಭೈರೇಗೌಡ ಹಾಗೂ ಹಳ್ಳಿಮೈಸೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಹೊಳೆನರಸೀಪುರ ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಹೊನ್ನಿಕೊಪ್ಪಲು ಮಂಜೇಗೌಡ ಹಾಗೂ ಎಚ್.ಆರ್.ನಾರಾಯಣ್ ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅನುಪಮ ಅವರ ಸೋಲಿಗೆ ಎ.ಮಂಜು ಕಾರಣ ಎಂದು ಆರೋಪಿಸಿರುವ ಕುರಿತಂತೆ ತೀವ್ರವಾಗಿ ಆಕ್ಷೇಪಿಸಿದರು.
ಗ್ರಾಪಂ ಚುನಾವಣೆಯನ್ನೂ ಗೆಲ್ಲದವರು: ಎ.ಮಂಜು 3 ಬಾರಿ ಜನಾದೇಶ ಪಡೆದು ಶಾಸಕರಾಗಿದ್ದಾರೆ. ಆದರೆ ಯಾವುದೇ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲದ ಈ ಮುಖಂಡರುಗಳೆನಿಸಿದವರು, ಕಾಂಗ್ರೆಸ್ಗೆ ಸೇರಿದ ನಂತರ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನುಪಮ ಅವರ ಗೆಲುವಿಗೆ ಇವರು ಎಷ್ಟು ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂಬುದನ್ನು ಅನುಪಮ ಹಾಗೂ ಕ್ಷೇತ್ರದ ಮತದಾರರ ಮುಂದೆ ನಿಂತು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ ಎಂದು ಎ.ಡಿ.ಚಂದ್ರಶೇಖರ್ ಸವಾಲು ಹಾಕಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಹೊಳೆನರಸೀಪುರ ಕ್ಷೇತ್ರದಲ್ಲಿ ಒಂದು ಪಕ್ಷಕ್ಕೆ ಮತ ನೀಡುವಂತೆ ಮತದಾರರನ್ನು ದಿಕ್ಕುಗೆಡಿಸಿದ ಈ ಮುಖಂಡರು ಹಳ್ಳಿಮೈಸೂರು ಹೋಬಳಿಯಲ್ಲಿ ಕೆಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರನ್ನು ಓಲೈಸಿರುವುದು ಈ ಕ್ಷೇತ್ರದ ಎಲ್ಲ ಮತದಾರರಿಗೂ ತಿಳಿದಿದೆ. ಕಾಂಗ್ರೆಸ್ ಜಿಲ್ಲಾ ಮುಖಂಡರೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯುತ್ತ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ, ತಾವು ನಾಯಕರಾಗಿ ಬೆಳೆಯಬಹುದೆನ್ನುವ ಭ್ರಮೆಯಿದ್ದಲ್ಲಿ ಅದನ್ನು ಕೂಡಲೇ ಕಳಚಿಡುವಂತೆ ಚಂದ್ರಶೇಖರ್ ಹೇಳಿದರು.
ಇಂತಹ ಅಪಪ್ರಚಾರಗಳಿಗೆ ಕಿವಿಗೊಡದ ಪ್ರಜ್ಞಾವಂತ ಮತದಾರರು ಎ.ಮಂಜು ಅವರ ಮೇಲೆ ನಂಬಿಕೆ ಇರುವ ಕಾರಣದಿಂದಲೆ ಅವರಿಗೆ ಮೂರನೇ ಬಾರಿಗೆ ಜಯನೀಡಿದ್ದಾರೆ. ಇಂಥ ಅಪಪ್ರಚಾರಗಳನ್ನು ಈ ಮುಖಂಡರು ಕೂಡಲೇ ನಿಲ್ಲಿಸದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಬಳಿಗೆ ಹಳ್ಳಿಮೈಸೂರು ಹೋಬಳಿಯಿಂದ ನಿಷ್ಠಾವಂತ ಕಾಂಗ್ರೆಸ್ಸಿಗರ ನಿಯೋಗ ತೆರಳಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಿದೆ ಎಂದೂ ತಿಳಿಸಿದರು.
ಅರಕಲಗೂಡು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಭೈರೇಗೌಡ ಮಾತನಾಡಿ, ಶಾಸಕ ಎ.ಮಂಜು ಅವರ ರಾಜಕೀಯ ಪ್ರಗತಿಯನ್ನು ಸಹಿಸದ ಕೆಲ ಕಾಂಗ್ರೆಸ್ಸಿಗರ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕುಚೋದ್ಯದ ಹೇಳಿಕೆ ನೀಡಿರುವ ಉನ್ನಿಕೊಪ್ಪಲು ಮಂಜೇಗೌಡ ಹಾಗೂ ಎಚ್.ಆರ್.ನಾರಾಯಣ್ ಅವರು ಜಿಲ್ಲೆಯ ಕಾಂಗ್ರೆಸ್ನಲ್ಲಿ ಒಡಕು ಮೂಡಿಸಲು ಜೆಡಿಎಸ್ ಏಜೆಂಟರಂತೆ ವರ್ತಿಸುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಏಕಪಕ್ಷೀಯ ನಿರ್ಧಾರ ಯಾವ ಪುರುಷಾರ್ಥಕ್ಕೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಎ.ಮಂಜು ಅವರ ವಿರುದ್ಧ ಸ್ಪರ್ಧಿಸಿ ಸೋತ ನಂತರ ಕಾಂಗ್ರೆಸ್ ಸೇರಲು ಮುಂದಾದವರನ್ನು, ಜಿಲ್ಲಾ ಕಾಂಗ್ರೆಸ್ ನಾಯಕರೆನಿಸಿದವರು ಕನಿಷ್ಠ ಸೌಜನ್ಯಕ್ಕಾದರೂ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ವಿಷಯವನ್ನು ತಾರದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ ಕೆ.ಭೈರೇಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಜಿಲ್ಲೆಯಲ್ಲಿ ಕಾಂಗ್ರೆಸನ್ನು ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಕೆಲವರು ಈ ರೀತಿಯಾಗಿ ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡುವುದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು. ಸಾಂಬಶಿವಪ್ಪ, ಪುಟ್ಟೇಗೌಡ, ಶಿವಣ್ಣ, ಹಿರಿತಳಾಲು ಯೋಗೇಶ್ ಇತರರು ಇದ್ದರು.