ಸಂಘಟನೆ ಪ್ರಮುಖರ ಹೇಳಿಕೆ ನಿರಾಧಾರ
ಕ.ಪ್ರ.ವಾರ್ತೆ ಬೇಲೂರು ಸೆ.4
ಪ್ರಗತಿಪರ ಸಂಘಟನೆ ಹಾಗೂ ಗೌರವಾಧ್ಯಕ್ಷರ ವಿರುದ್ಧ ಹೇಳಿಕೆ ನೀಡುತ್ತಿರುವ ಇತರೆ ಸಂಘಟನೆಯ ಪ್ರಮುಖರು ನಿರಾಧಾರ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತಾಲೂಕಿಗೆ ಉಪಕಾರ ಮಾಡಲಿ ಎಂದು ತಾಲೂಕು ಪ್ರಗತಿಪರ ಸಂಘಟನೆ ಅಧ್ಯಕ್ಷ ಬಳ್ಳೂರು ಸ್ವಾಮಿಗೌಡ ಹಾಗೂ ಡಿಎಸ್ಡಿಎಸ್ ಸಂಚಾಲಕ ಲಕ್ಷ್ಮಣ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿರುವ 16 ಪ್ರಮುಖ ಸಂಘಟನೆಗಳ ಸಹಕಾರದೊಂದಿಗೆ ಪ್ರಗತಿಪರ ಸಂಘಟನೆ ಆರಂಭಗೊಂಡಿದ್ದು ಗೌರವಾಧ್ಯಕ್ಷರಾಗಿ ಕೆ. ಸುದರ್ಶನ್, ಅಧ್ಯಕ್ಷರಾಗಿ ತಾವು ಅವಿರೋಧವಾಗಿ ಆಯ್ಕೆಯಾಗಿರುವುದು ತಾಲೂಕಿನ ಜನತೆಗೆ ಗೊತ್ತಿರುವ ವಿಚಾರವಾಗಿದೆ.
ಆದರೆ ಪ್ರಗತಿಪರ ಸಂಘಟನೆ ತಾಲೂಕಿನಲ್ಲಿ ಇಲ್ಲ ಎಂದು ಆರೋಪ ಮಾಡುತ್ತಿರುವ ಡಾ.ರಾಜ್ ಅಭಿಮಾನಿಗಳ ಸಂಘದ ತೀರ್ಥಂಕರ್ ಅವರ ನಡೆ ಹಾಗೂ ನುಡಿ ಪ್ರೇಮದ ಬಗ್ಗೆ ತಾಲೂಕಿನ ಜನತೆ ಸಂಪೂರ್ಣ ಅರಿತಿದ್ದಾರೆ. ಅಲ್ಲದೆ ಇವರ ಜೊತೆ ಆರೋಪ ಮಾಡಿರುವ ಸಂಘಟನೆಯ ಪ್ರಮುಖರು ಪ್ರಗತಿಪರ ಸಂಘಟನೆ ಬ್ಯಾನರ್ ಅಡಿಯಲ್ಲಿ ಬಂದು ಭಾಗವಹಿಸಿದ್ದು, ಗೌರವಾಧ್ಯಕ್ಷ ಸುದರ್ಶನ್ ಆಗಲಿ ಅಥವ ಪ್ರಗತಿಪರ ಸಂಘಟನೆಯ ಸದಸ್ಯರಾಗಲಿ ಹೋಗಿಲ್ಲ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.
ಒಬ್ಬರ ವಿರುದ್ಧ ಆರೋಪ ಮಾಡುವಾಗ ತಾವು ಎಷ್ಟರ ಮಟ್ಟಿಗೆ ಸರಿಯಾಗಿದ್ದೇನೆ ಎಂಬುದನ್ನು ನೋಡಿಕೊಂಡು ನಂತರ ಮಾತಾಡಬೇಕು. ಇನ್ನು ಮುಂದೆ ಪ್ರಗತಿಪರ ಸಂಘಟನೆ ಈಗ ಆರೋಪ ಮಾಡುತ್ತಿರುವ ಸಂಘಟನೆಗಳ ಜೊತೆ ಯಾವುದೇ ಪ್ರತಿಭಟನೆ ಅಥವ ಇತರೆ ವಿಚಾರಗಳಿಗೆ ತಲೆ ಹಾಕುವುದಿಲ್ಲ ಹಾಗೂ ಅವರು ಮಾಡುವ ಯಾವುದೇ ಹುರುಳಿಲ್ಲದೆ ಆರೋಪಗಳಿಗೆ ಉತ್ತರಿಸುತ್ತಾ ಕಾಲಹರಣ ಮಾಡಲು ಬಯಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.