2ನೇ ದಿನಕ್ಕೆ ಪಶು ವೈದ್ಯ ವಿದ್ಯಾರ್ಥಿಗಳ ಧರಣಿ
ಕನ್ನಡಪ್ರಭ ವಾರ್ತೆ ಹಾಸನ ಸೆ. 5
ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭಾರತೀಯ ಪಶು ವೈದ್ಯಕೀಯ ಮಂಡಳಿ ಮಾನ್ಯತೆ ನೀಡುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
2007ರಲ್ಲಿ ರಾಜ್ಯ ಸರ್ಕಾರದ ಅನುಮತಿಯ ಮೇರೆಗೆ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯವು ಆರಂಭಗೊಂಡಿದ್ದು, ಕಳೆದ 7 ವರ್ಷಗಳಲ್ಲಿ ಗಣನೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ಹೊಂದುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಈ ಮಂದಗತಿಯ ಬೆಳವಣಿಗೆಯಿಂದಾಗಿ ಮಹಾವಿದ್ಯಾಲಯವು ಭಾರತ ಸರ್ಕಾರದ ಪಶು ವೈದ್ಯಕೀಯ ಮಂಡಳಿಯ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಾನ್ಯತೆ ಇಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದೆ. ಮಂಡಳಿಯ ಸತತ ಎಚ್ಚರಿಕೆಗಳ ನಂತರವು ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯ ಮಂಡಳಿಯು ನಿಗದಿಪಡಿಸಿರುವ ಮಾನದಂಡಗಳನ್ನು ತಲುಪದೆ ಇದ್ದ ಕಾರಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆವಿಸಿ ನೊಂದಣಿ ಪಡೆಯುವದರಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಈ ಕಾಲೇಜಿನಲ್ಲಿ ವ್ಯಾಸಂಗದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ಪ್ರಮಾಣ ಪತ್ರ ಲಭ್ಯವಾಗದ ಕಾರಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬಿದಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2009-10ನೇ ಸಾಲಿನಲ್ಲಿ ಪಶುವೈದ್ಯಕೀಯ ಮಂಡಳಿಯ ಸದಸ್ಯರು ನಮ್ಮ ವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ರೇಷ್ಮೆ ಇಲಾಖೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಕಂಡು ಒಂದು ಪಶವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲದಿರುವ ಕಾರಣದಿಂದ ಮಾನ್ಯತೆ ನೀಡಿಲ್ಲ.
ಈಗಾಗಲೇ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೆವಿಸಿ ನೊಂದಣಿಯ ಪ್ರಮಾಣ ಪತ್ರ ನೀಡಿಲ್ಲ.
ಮುಂದೆ ಪಾಸಾಗುವವರಿಗೂ ಪ್ರಮಾಣ ಪತ್ರ ಸಿಗುತ್ತದೆ ಎನ್ನುವ ಖಾತ್ರಿಯೂ ಇಲ್ಲ ಎಂದು ದೂರಿದರು. ಆದ್ದರಿಂದ ಕೂಡಲೇ ಕಾಲೇಜಿ ಭಾರತೀಯ ಪಶುವೈದ್ಯಕೀಯ ಮಹಾವಿದ್ಯಾಲಯದ ಮಾನ್ಯತೆ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪ್ರಮೋದ್, ನಿತಿನ್, ಕೋಟ್ರೇಶ್, ಮಾರುತಿ, ರಮೇಶ್, ಚೇನತ್, ಕಿರಣ್, ಮಂಜುನಾಥ್, ಸಂತೋಷ್, ಮೋಹನ್, ಪ್ರವೀಣಕುಮಾರ್, ರೋಹಿತ್, ಭೂತೇಶ್, ನವೀನ್, ರವಿಕುಮಾರ್, ಸುರೇಶ್, ಹಿತೈಶಿಣಿ, ರಮ್ಯ, ಕಾವ್ಯ, ಪೂರ್ಣಿಮಾ, ಪಲ್ಲವಿ, ಸಂಧ್ಯಾ, ಸೌಮ್ಯ ಇತರರು ಇದ್ದರು.