ಎಣ್ಣೆ ಬಾಟ್ಲಿ ಮುಂದಿಟ್ಟು ಸಮಸ್ಯೆ ಹೇಳಿಕೊಂಡ!
ಕ.ಪ್ರ.ವಾರ್ತೆ ಹಾಸನ ಸೆ. 5
ಜನಪ್ರತಿನಿಧಿಗಳ ಬಳಿ ಸಮಸ್ಯೆ ಹೇಳಿಕೊಳ್ಳಲು ಅರ್ಜಿ ಹಿಡಿದುಕೊಂಡು ದುಂಬಾಲು ಬೀಳುವುದು ಸಾಮಾನ್ಯ. ಆದರೆ, ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತನ್ನ ಸಮಸ್ಯೆ ಹೇಳಿಕೊಳ್ಳಲು ಲೋಕೋಪಯೋಗಿ ಸಚಿವ ಡಾ.ಎಚ್.ಎಸ್. ಮಹದೇವಪ್ಪ ಅವರಿಗೆ ಮದ್ಯದ ಬಾಟಲಿ ಇಟ್ಟು ನಿವೇದಿಸಿಕೊಂಡಿದ್ದಾನೆ!
ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಮಹದೇವಪ್ಪ ಗುರುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಪತ್ರಕರ್ತರ ತರಹೇವಾರಿ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿರುವಾಗಲೇ ಕಾಂಗ್ರೆಸ್ ಕಾರ್ಯಕರ್ತ ಕರಿಯಪ್ಪ ಎಂಬವರು ಮದ್ಯದ ಬಾಟಲಿ ಹಿಡಿದುಕೊಂಡು ಬಂದು ಸಚಿವರೆದುರಿಟ್ಟು ತಮ್ಮ ಸಮಸ್ಯೆ ನಿವೇದಿಸಿಕೊಳ್ಳಲು ಶುರು ಮಾಡಿದರು. 'ಸಚಿವರೇ, ಕರ್ನಾಟಕದಲ್ಲಿ 1 ಕೋಟಿ ಮಹಿಳೆಯರು ಸೇರಿದಂತೆ 4 ಕೋಟಿ ಜನರು ಕುಡಿಯುತ್ತಾರೆ. ಗ್ರಾಮೀಣ ಭಾಗದ ಜನರಿಗೆ ಕುಡಿದೇ ಇದ್ರೆ ನಿದ್ರೆನೇ ಬರಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಮದ್ಯ ಮಾರಾಟಗಾರರು ಶೇ.30ಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಾರೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದೇ ಇದಕ್ಕೆಲ್ಲಾ ಕಾರಣ' ಎಂದು ಅಳಲು ತೋಡಿಕೊಂಡರು. ಮದ್ಯದ ಬಾಟಲ್ ಪಡೆದುಕೊಂಡ ಸಚಿವರು, 'ಭಾರಿ ಸಮಸ್ಯೆನೇ ತಂದಿದ್ದೀರಿ. ನೋಡೋಣ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು' ಎಂದು ಸುಮ್ಮನಾದರು.