ಕಾನೂನು ವಿದ್ಯಾರ್ಥಿಗಳ ನಿಲ್ಲದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಸೆ. 5
ಸರ್ಕಾರಿ ಕಾನೂನು ಕಾಲೇಜಿನ ತರಗತಿಗಳನ್ನು ನೂತನ ಕಟ್ಟಡದಲ್ಲಿ ನಡೆಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಕಾನೂನು ವಿದ್ಯಾರ್ಥಿಗಳ ವೇದಿಕೆಯ ವಿದ್ಯಾರ್ಥಿಗಳು ಕೈಗೊಂಡಿದ್ದ ಪ್ರತಿಭಟನೆ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿಭಟನಾಕಾರರು ನೂತನ ಕಟ್ಟಡದ ಮುಂದೆ ಪ್ರತಿಭಟನೆ ಮುಂದುವರೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಸರ್ಕಾರಿ ಕಾನೂನು ಕಾಲೇಜು ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಇದುವರೆಗೂ ತರಗತಿಗಳು ನಡೆಯುತ್ತಿದ್ದು, ಕಳೆದ 5 ವರ್ಷದಿಂದ ಸರ್ಕಾರಿ ಕಾನೂನು ಕಾಲೇಜಿನ ಸ್ವಂತ ಕಟ್ಟಡದ ಕಾಮಗಾರಿ ನಡೆದು ಮುಕ್ತಾಯಗೊಂಡಿದೆ. ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವಿದ್ದರೂ, ಈಗಿರುವ ಖಾಸಗಿ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ವಿಶಾಲವಾದ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸಮಸ್ಯೆಗಳಿದೆ ಎಂದು ದೂರಿದರು. ಸರ್ಕಾರಿ ಕಾನೂನು ಕಾಲೇಜಿನ ತರಗತಿಗಳನ್ನು ನೂತನ ಕಟ್ಟಡದಲ್ಲಿ ಪ್ರಾರಂಭವಾಗಬೇಕು ಹಾಗೂ ಅಗತ್ಯವಿರುವ ರಸ್ತೆ ಸಂಪರ್ಕವನ್ನು ಕಲ್ಪಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಎಚ್.ಇ.ಅನ್ಷಾದ್, ಎಚ್.ಯು.ವಚನ್, ವಿಜಯೇಂದ್ರ, ಮಹೇಶ್, ಕಲಾ ಇತರರು ಇದ್ದರು.