ನೇತ್ರದಾನ ಅಂಗವಾಗಿ ವಿದ್ಯಾರ್ಥಿಗಳಿಂದ ಜಾಥಾ
ಕನ್ನಡಪ್ರಭ ವಾರ್ತೆ ಆಲೂರು ಸೆ.5
ಕಣ್ಣು ಪಂಚೇಂದ್ರಿಯಗಳಲ್ಲೇ ಅಮೂಲ್ಯ ಸ್ವತ್ತು. ಕಣ್ಣಿಲ್ಲದವರ ಬದುಕು ನರಕ. ಸಾರ್ವಜನಿಕರು ತಮ್ಮ ಬಂಧುಗಳ ಮರಣಾನಂತರ ಅವರ ಕಣ್ಣುಗಳನ್ನು ದೇಹದ ಜೊತೆ ಸುಡದೆ ಅಥವಾ ಮಣ್ಣು ಮಾಡದೆ ಅವಶ್ಯಕತೆ ಇರುವವರಿಗೆ ದಾನ ಮಾಡಿದರೆ ಅಂಧರಿಗೆ ಮರಳಿ ದೃಷ್ಟಿ ದೊರೆತು ಅವರ ಬಾಳಿಗೆ ಬೆಳಕು ನೀಡಲು ಸಾಧ್ಯ ಎಂದು ತಾಲೂಕು ವೈದ್ಯಾಧಿಕಾರಿ ಟಿ.ತಿಮ್ಮಯ್ಯ ತಿಳಿಸಿದರು.
ಪಟ್ಟಣದಲ್ಲಿ 28ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದಲ್ಲಿ 15 ಲಕ್ಷ ಜನರು ಕಣ್ಣಿನ ಮಧ್ಯ ಇರುವ ಕಪ್ಪು ಪಾರದರ್ಶಕ ಪಟಲ, ಕಾರಣಾಂತರದಿಂದ ದೃಷ್ಟಿ ಹೀನರಾಗಿ ಅತ್ಯಂತ ದಾರುಣರಾಗಿ ಬಾಳುತ್ತಿರುತ್ತಾರೆ. ಇವರ ಜೊತೆಗೆ ಪ್ರತಿ ವರ್ಷ ಸುಮಾರು 40 ರಿಂದ 50 ಸಾವಿರ ಜನರು ಈ ವರ್ಗಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇವರ ಅಂಧತ್ವ ನಿವಾರಣೆಗೆ ಜನ ಸ್ವಯಂ ಸ್ಫೂರ್ತಿಯಿಂದ ನೇತ್ರದಾನಕ್ಕೆ ಮುಂದೆ ಬರಬೇಕಿದೆ. ಕಾರ್ಯಕ್ರಮ ಉದ್ಘಾಟಿಸಿದ ಡಾ.ಉಮಾದೇವಿ ಮಾತನಾಡಿ, ನಮಗೆ ಲಭ್ಯವಾಗುತ್ತಿರುವ ಮೃತ ದಾನಿಗಳ ಕಣ್ಣುಗಳು ಕೇವಲ 25 ಸಾವಿರ ಮಾತ್ರ. ಇನ್ನೂ ಸುಮಾರು 75 ಸಾವಿರದಿಂದ 1 ಲಕ್ಷದಷ್ಟು ಪ್ರತಿ ವರ್ಷ ಈ ಕಾರ್ಯಕ್ಕೆ ಮೃತರ ನೇತ್ರಗಳು ಬೇಕಾಗುತ್ತವೆ.
ಹಾಸನ ಜಿಲ್ಲೆಯಲ್ಲಿಯೂ ಸಹ ಸುಮಾರು 250 ರಿಂದ 300 ಜನರು ಈ ತೆರನಾದ ಕುರುಡುತನದಿಂದ ನರಳುತ್ತಿದ್ದಾರೆ. ಒಬ್ಬ ನೇತ್ರದಾನಿ 2 ಜನರಿಗೆ ದೃಷಿದಾನ ಮಾಡಬಹುದು. ಜನರು ಮರಣದ ನಂತರವೂ ಸಹ ತಮ್ಮ ಕಣ್ಣುಗಳ ಸದುಪಯೋಗವಾಗಿ ಅಂಧರ ಬಾಳಿನ ಅಂಧಕಾರವನ್ನು ನೀಗಿಸಲು ಶ್ರಮಿಸಬೇಕು.ಇದಕ್ಕೆ ನೇತ್ರ ದಾನದ ಮಹತ್ವ ಹಾಗು ಅರಿವು ಅವಶ್ಯಕ ಎಂದರು.
ನೇತ್ರಾಧಿಕಾರಿ ಇಸಿಧರ್ ಕುಮಾರ್, ಹಿರಿಯ ಆರೋಗ್ಯ ಸಹಾಯಕ ಎಚ್.ಎಸ್.ವೇಂಕಟೇಶ್, ಎ.ವೈ.ರಾಜೇಗೌಡ, ಸತೀಶ್, ಎಚ್.ಜಿ.ವನಜಾಕ್ಷಿ, ಶಿಕ್ಷಕ ಎ.ಟಿ.ಮಲ್ಲೇಶ್, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.