ಪರಿಸರಕ್ಕೆ ಧಕ್ಕೆ, ಆರೋಗ್ಯಕ್ಕೆ ಮಾರಕ
ಹಾಸನ: ಜಿಲ್ಲೆ ಅಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯ. ಆದರೆ ನಗರದ ಹೊರವಲಯದಲ್ಲಿರುವ ಅನೇಕ ಕಾರ್ಖಾನೆಗಳು ವಿಷಕಾರಿ ಅನಿಲ ಹಾಗೂ ರಾಸಾಯನಿಕ ವಸ್ತುಗಳನ್ನು ಹೊರ ಬಿಡುವ ಮೂಲಕ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿವೆ.
ಹೊಸ ಹೊಸ ಅತ್ಯಾಧುನಿಕ ಕಾರ್ಖಾನೆಗಳನ್ನು ಪ್ರಾರಂಭಿಸಿ ನಿರುದ್ಯೋಗ ಹಾಗೂ ಇತರೆ ಸಮಸ್ಯೆಗಳನ್ನು ನಿವಾರಿಸಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿರುವುದು ಸರಿ. ಆದರೆ ನಗರದ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಿರುವ ದೊಡ್ಡ ದೊಡ್ಡ ಕೈಗಾರಿಕೆಗಳು ವಿಷಕಾರಿ ರಾಸಾಯನಿಕಗಳನ್ನು ಹೊರ ಸೂಸುವ ಮೂಲಕ ನಗರವನ್ನು ವಿನಾಶಕ್ಕೆ ದೂಡುತ್ತಿವೆ.
ಮೀನುಗಳ ಮಾರಣಹೋಮ: ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಸಮುದ್ರವಳ್ಳಿ, ನಾಗತಹಳ್ಳಿ, ಟಿ.ಕಾಟೀಹಳ್ಳಿ, ದೊಡ್ಡಪುರ, ಹೊಸಕೊಪ್ಪಲು, ಚನ್ನಪಟ್ಟಣ, ಕೌಶಿಕ, ಹನುಮಂತಪುರ, ಮೊಸಳೆಹೊಸಳ್ಳಿ, ಗವೇನಹಳ್ಳಿ, ಬೂವನಹಳ್ಳಿ ಇತ್ಯಾದಿ ಗ್ರಾಮಗಳ ಜನತೆ ಈ ಕೈಗಾರಿಕೆಗಳಿಂದ ಬರುವ ವಿಷಕಾರಿ ರಾಸಾಯನಿಕಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶದಲ್ಲಿರುವ ನಾನಾ ಕಾರ್ಖಾನೆಗಳು ವಿಷಕಾರಿ ರಾಸಾಯನಿಕವನ್ನು ಕೆರೆಕಟ್ಟೆಗಳಿಗೆ ಬಿಡುತ್ತಿರುವುದರಿಂದ ಸಾವಿರಾರು ಮೀನುಗಳ ಮಾರಣಹೋಮ ಆಗುತ್ತಿದೆ. ಹಾಗೆಯೇ ಕಾರ್ಖಾನೆಗಳ ರಾಸಾಯನಿಕದಿಂದ ವಿಷಕಾರಿಯಾಗಿರುವ ಕೆರೆ ಕಟ್ಟೆಯಲ್ಲಿ ನೀರನ್ನು ಕುಡಿದ ದನಕರುಗಳು ಸಾವನ್ನಪ್ಪುತ್ತಿವೆ. ಜೊತೆಗೆ ಕೆಲ ಕಾರ್ಖಾನೆಗಳು ವಿಷಕಾರಿ ಅನಿಲಗಳನ್ನು ಹೊರ ಬಿಡುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನಾರೋಗ್ಯದ ಭೀತಿ ತಂದೊಡ್ಡಿವೆ. ಕಾರ್ಖಾನೆಗಳು ಹಾಕುತ್ತಿರುವ ಮಲಿನ ನೀರು, ಗಿಡಗಂಟಿಗಳಿಗೆ ಅಕ್ಷರಶ: ನಂಜಾಗಿದ್ದರೆ, ಸುತ್ತಮುತ್ತಲ ಗ್ರಾಮಗಳ ಜನ ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ವಾತಾವರಣ ಗಬ್ಬು ನಾರುವಂತೆ: ಕಾರ್ಖಾನೆಗಳಿಂದ ಹೊರ ಬಿಡುತ್ತಿರುವ ದುರ್ವಾಸನೆಯಿಂದ ಗಿಡಮರಗಳಿಗೆ ನಂಜಾಗಿ ಅರಣ್ಯ ಇಲಾಖೆ ನಿಟ್ಟಿರುವ ಗಿಡಗಳು ಒಣಗಿ ಹೋಗಿವೆ. ಕಾರ್ಖಾನೆಗಳ ವಿಷಕಾರಿ ರಾಸಾಯನಿಕ ಕೊಳೆ ನೀರು ಸುತ್ತಮುತ್ತಲ ವಾತಾವರಣವನ್ನು ಗಬ್ಬು ನಾರುವಂತೆ ಮಾಡಿದೆ. ಕಾರ್ಖಾನೆಯಿಂದ ಹೊರ ಹೋಗುವ ನೀರು ಕೆರೆ ಸೇರಿ ಜಲಚರ ವಾಸಿಗಳನ್ನು ಕೊಲ್ಲುತ್ತಿದೆ. ಈ ಮಾರ್ಗದಲ್ಲಿ ಓಡಾಡುವ ಸುತ್ತಮುತ್ತಲಿನ ಗ್ರಾಮಗಳ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉದ್ಭವಿಸಿದೆ. ಕಾರ್ಖಾನೆಗಳಿಗೆ ನೀಡಿರುವ ಜಾಗದ ಹೊರತಾಗಿಯೂ ಸಾರ್ವಜನಿಕ ರಸ್ತೆಯನ್ನೂ ಬಳಸಿಕೊಳ್ಳಲಾಗುತ್ತಿರುವುದರಿಂದ ಕಾರ್ಖಾನೆಯ ಹೊರಗೆ ಸಾಲುಗಟ್ಟಿ ನಿಲ್ಲುವ ಲಾರಿ ಮತ್ತು ಟ್ರ್ಯಾಕ್ಟರ್ಗಳಿಂದ ಗ್ರಾಮಸ್ಥರು ಓಡಾಡಲು ಸಾಧ್ಯವಾಗುತ್ತಿಲ್ಲ. ಮಲೀನ ನೀರಿನಿಂದ ಸೊಳ್ಳೆ ಸಂತತಿ ಮಿತಿ ಮೀರಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ದುರ್ವಾಸನೆ ತಡೆಗಟ್ಟುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ಉದ್ಯೋಗ ನೀಡದೆ ವಂಚನೆ: ಇಲ್ಲಿನ ಕೆಲ ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಗ್ರಾಮಸ್ಥರ ಸಹಕಾರ ನೀಡುವಂತೆ ಕಾರ್ಖಾನೆಯವರು ಒಪ್ಪಂದ ಮಾಡಿಕೊಂಡಿದ್ದರೂ ಇಂದಿಗೂ ಬಹಳಷ್ಟು ಮಂದಿ ಗ್ರಾಮಸ್ಥರ ಕುಟುಂಬಕ್ಕೆ ಉದ್ಯೋಗವನ್ನು ನೀಡದೆ ವಂಚಿಸಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರಿಗೆ ದೂರು ನೀಡಿದರೂ ಇದುವರೆಗೂ ಪ್ರಯೋಜನವಾಗಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವಂತಹ ಗ್ರಾಮಗಳಲ್ಲಿ ವಿಷಕಾರಿ ರಾಸಾಯನಿಕಗಳಿಂದ ದುರ್ವಾಸನೆ ಹೆಚ್ಚಾಗುತ್ತಿದ್ದು, ನಾನಾ ರೋಗ ರುಜಿನಗಳು ಹರಡಿ ಗ್ರಾಮಸ್ಥರು ಅಸ್ವಸ್ಥರಾಗುತ್ತಿದ್ದಾರೆ.
ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಎಚ್ಚರಿಕೆ ವಹಿಸಬೇಕಾಗಿದೆ. ಕೈಗಾರಿಗಳ ಅಭಿವೃದ್ಧಿಯಿಂದ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ಹೊಂದಲಾಗಿತ್ತು. ಆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗದೆ ಮತ್ತಷ್ಟು ಬಿಗಡಾಯಿಸಿದೆ. ಕೆಲವು ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನ ಸುತ್ತಮುತ್ತಲಿನ ಗ್ರಾಮಗಳ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದವರು ಉದ್ಯೋಗ ನೀಡದೆ ವಂಚಿಸಿವೆ. ಇನ್ನೊಂದೆಡೆ ಕಾರ್ಖಾನೆಯ ಆಡಳಿತ ಮಂಡಳಿಯವರ ದಬ್ಬಾಳಿಕೆ ಹಾಗೂ ದೌರ್ಜನ್ಯ ಹೆಚ್ಚಾಗಿ ಉಉದ್ಯೋಗಿಗಳಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಒದಗಿಸದೇ ಹೆಚ್ಚಿನ ಸಮಯ ದುಡಿಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾನಾ ಕಾರ್ಖಾನೆಗಳ ನೌಕರರೇ ಪ್ರತಿಭಟಿಸಿದ್ದರೂ ಈವರೆಗೂ ಯಾವುದೇ ಸಮಸ್ಯೆಗಳು ನಿವಾರಣೆಯಾಗಿಲ್ಲ.
ಪಿ.ರವಿಕುಮಾರ್