'ಬಾಡಿಗೆ ಭತ್ಯೆ ತಾರತಮ್ಯ ಸರಿಪಡಿಸಲು ಪ್ರಯತ್ನ'
ಹಾಸನ: ಸರ್ಕಾರಿ ನೌಕರರ ಬಾಡಿಗೆ ಭತ್ಯೆ ನೀಡುವಲ್ಲಿ ತಾರತಮ್ಯ ಇದ್ದು, ಇದನ್ನು ಸರಿಪಡಿಸಲು 7ನೇ ವೇತನ ಆಯೋಗದಲ್ಲಿ ಪ್ರಯತ್ನಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ಹೇಳಿದ್ದಾರೆ.
ಅರಕಲಗೂಡು ಸರ್ಕಾರಿ ನೌಕರರ ನೂತನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಮನೆ ಬಾಡಿಗೆ ಭತ್ಯೆ ಶೇ.30ರಷ್ಟಿದ್ದು ರಾಜ್ಯದ ವಿವಿಧೆಡೆ ಅದು ಶೇ.4, ಶೇ.6 ಮತ್ತು ಶೇ.7 ಆಗಿದೆ. ಈ ತಾರತಮ್ಯ ನೀಗಲು 7ನೇ ವೇತನ ಆಯೋಗದಲ್ಲಿ ಪ್ರಯತ್ನಿಸುವಂತೆ ಒತ್ತಡ ಹೇರಲಾಗುವುದು ಎಂದರು.
ನಾನು ಸಹಾ ರಾಜ್ಯಾಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದೆ. ಕೇಂದ್ರ ಸಮಿತಿ ಸದಸ್ಯರಾಗಿರುವ 103 ಸದಸ್ಯರ ಪೈಕಿ ನನಗೆ 60-70 ಮಂದಿ ಬೆಂಬಲ ಸೂಚಿಸಿದ್ದರು. ಆದರೆ ಸಂಧಾನದ ಫಲವಾಗಿ ಬೈರಪ್ಪನವರನ್ನೇ ಅಧ್ಯಕ್ಷರ ನ್ನಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ನೌಕರರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಲಾಗುವುದು ಎಂದು ತಿಳಿಸಿದರು. ಅರಕಲಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ ಮಾತನಾಡಿ, ತಾಲೂಕಿನಲ್ಲಿ ಯುವ ಉತ್ಸಾಹಿ ಮಂಜೇಗೌಡ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತೋಷದ ವಿಚಾರ. ಅವರ ಸಹಕಾರ ದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲಾಗುವುದು. ತಾಲೂಕಿನ ನೌಕರರ ನಿರೀಕ್ಷೆಯಂತೆ ನೌಕರರ ಭವನ ನಿರ್ಮಾಣವಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಹಾಲ್ ನಿರ್ಮಿಸಲಾಗುವುದು. ಹಾಗೆಯೇ ಮನರಂಜನಾ ಕೂಟವನ್ನು ಸ್ಥಳಾಂತರಿಸಲಾಗುವುದು ಎಂದ ಅವರು ನಿವೃತ್ತ ನೌಕರರಿಗೆ ಸಭೆ ನಡೆಸಲು ಇದೇ ಭವನದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ನುಡಿದರು.
ಸಂಘದ ಗೌರವಾಧ್ಯಕ್ಷ ಗಂಗಾಧರ್, ರಾಜ್ಯ ಪ್ರತಿನಿಧಿ ಡೆಲ್ವಿಕುಮಾರ್, ಪಿಡಿಓ ನಟರಾಜ ಮಾತನಾಡಿದರು. ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.