'ಭಾರತೀಯ ತತ್ವಶಾಸ್ತ್ರಕ್ಕೆ ಡಾ. ರಾಧಾಕೃಷ್ಣನ್ ಕೊಡುಗೆ ಅಪಾರ'
ಕನ್ನಡಪ್ರಭ ವಾರ್ತೆ ಹಾಸನ ಸೆ 5
ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ, ಈ ದೇಶದ ರಾಷ್ಟ್ರಪತಿಯಾಗಿ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದ್ದ ಡಾ. ರಾಧಾಕೃಷ್ಣನ್ ಅವರು ಭಾರತೀಯ ತತ್ವಶಾಸ್ತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದು ಬನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಎಸ್.ರಾಜಶೇಖರ್ ಅಭಿಪ್ರಾಯಪಟ್ಟರು.
ಮೊಸಳೆಹೊಸಹಳ್ಳಿ ಕಾಲೇಜಿನಲ್ಲಿ ಗುರುವಾರ ನಡೆದ ಡಾ.ರಾಧಾಕೃಷ್ಣನ್ ಜನ್ಮದಿನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪಾರವಾದ ಶಿಷ್ಯಕೋಟಿಯನ್ನು ಹೊಂದಿದ್ದ ರಾಧಾಕೃಷ್ಣನ್ ರಾಷ್ಟ್ರಪತಿಯ ಹುದ್ದೆ ಅಲಂಕರಿಸಿದಾಗಲೂ ತಮ್ಮೊಳಗಿನ ಗುರುವಿನ ಮನಸ್ಥಿತಿಯನ್ನು ಉಳಿಸಿಕೊಂಡು ದೇಶವನ್ನು ಮುನ್ನಡೆಸಿದರು. ಜೊತೆಗೆ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಪಡೆದು ಪಾಶ್ಚಾತ್ಯರಿಗೆ ಭಾರತೀಯ ತತ್ವಶಾಸ್ತ್ರದ ಮಹತ್ವವನ್ನು ಪರಿಚಯಿಸುವಲ್ಲಿ ಯಶಸ್ವಿಯಾದರು ಎಂದು ಅಭಿಪ್ರಾಯ ಪಟ್ಟರು. ಅಂತಹ ಮಹಾನ್ ಸಾಧಕನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವುದು ಗೌರವದ ಸಂಗತಿ ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಡಾ.ಡಿ.ಶ್ರೀನಿವಾಸ ಗುರು ಎಂಬುದು ವ್ಯಕ್ತಿಯಲ್ಲ ಅದು ಒಂದು ಶಕ್ತಿ ಎಂದರು. ದಿನಾಚರಣೆ ಶಿಕ್ಷಕರು ಆತ್ಮವಿಮರ್ಶೆ ದಿನ ಆಗಬೇಕು. ಇತ್ತೀಚಿನ ದಿನಗಳಲ್ಲಿ ಹರಡುತ್ತಿರುವ ಕ್ರೌರ್ಯಗಳು ಸಮಾಜದ ನೆಮ್ಮದಿಯನ್ನು ಭಂಗಗೊಳಿಸಿವೆ.
ಈ ಹಿನ್ನ್ನೆಲೆಯಲ್ಲಿ ತಮ್ಮ ಸವಾಲುಗಳನ್ನು ಅರಿತುಕೊಂಡು, ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸುಸಂಸ್ಕತ ಹಾಗೂ ನಾಗರಿಕ ವಿದ್ಯಾರ್ಥಿ ಸಮುದಾಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂತಹ ದಿನಾಚರಣೆಗಳು ಆ ಪ್ರಯತ್ನಗಳಿಗೆ ನಾಂದಿಯಾಗಲಿ ಎಂದು ಅವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಎಂ.ಮಾದೇಗೌಡ, ಗ್ರಂಥಪಾಲಕ ಎನ್.ಮಂಜುನಾಥ್, ಆಶಾ, ಶ್ರೀಧರ್, ಭವಾನಿ,ದಿನೇಶ್, ಕಾವ್ಯ ಗುರುವಿನ ಮಹತ್ವವನ್ನು ಕುರಿತು ಮಾತನಾಡಿದರು.
ಗುರುಸ್ತುತಿ ಮತ್ತು ನಾಡಗೀತೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಶಶಿ ಸ್ವಾಗತಿಸಿದರು. ಈಶ್ವರ್ ವಂದಿಸಿದರು, ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.