ವಿದ್ಯಾರ್ಥಿನಿಯರಿಗೆ ಪೂರ್ಣಕುಂಭ ಶಿಕ್ಷೆ...
ಬೇಲೂರು: ಶಿಕ್ಷಕರ ದಿನಾಚರಣೆಯಂದು ಪಟ್ಟಣದ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಕಳಸವನ್ನು ಹೊರಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗಂಟೆಗಟ್ಟಲೆ ನಿಲ್ಲಿಸಿ, ಮೆರವಣಿಗೆ ಮಾಡಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದಾಗಿ ಪೋಷಕರು ಹಾಗೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸೆ. 5 ರಂದು ರಾಷ್ಟ್ರಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಎಲ್ಲಾ ಶಾಲೆ ವಿದ್ಯಾನಿಲಯಗಳಲ್ಲಿ ಆಚರಿಸುತ್ತಾರೆ. ಕೆಲವೆಡೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ಕೆಲಮೊಮ್ಮೆ ಶಿಕ್ಷಕರ ದಿನಾಚರಣೆ ರಾಜಕಾರಣಿಗಳ ಭಾಷಣ ಸಮಾರಂಭ ಆಗಿರುವುದು ಉಂಟು, ಬೇಲೂರುಪ ಪಟ್ಟಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ವಿನೂತನವಾಗಿ ಆಚರಣೆ ಮಾಡಲು ಹೋಗಿ ವಿದ್ಯಾರ್ಥಿನಿಯರಿಗೆ ಕಳಸ ಹೊರುವ ಶಿಕ್ಷೆಯನ್ನು ನೀಡಲಾಯಿತು.
ಶಿಕ್ಷಕ ಹಾಗೂ ಮಾಜಿ ರಾಷ್ಟ್ರಪತಿ ದಿ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ನೆನಪಿಗಾಗಿ ಶಿಕ್ಷಕರ ದಿನಾಚರಣೆ ನಡೆಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕಳಸ ಹೊರುವ ಶಿಕ್ಷೆ ಯಾಕೆ ಬೇಕಿತ್ತು.
ಮೆರವಣಿಗೆಯಲ್ಲಿ ಪೂರ್ಣಕುಂಭ ಕಳಸ ಇರಲೇ ಬೇಕು ಎಂಬ ಆಸೆ ಕಾರ್ಯಕ್ರಮ ಆಯೋಜಕರಿಗಿದ್ದರೆ ಶಿಕ್ಷಕಿಯರಿಗೂ ಕಳಸ ಹೊರುವ ಜವಾಬ್ಧಾರಿ ಕೊಡಬೇಕಿತ್ತು. ಅದು ಬಿಟ್ಟು ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿನಿಯರಿಗೇಕೆ ಕಳಸ ಹೊರುವ ಶಿಕ್ಷೆಯ ಯೋಜನೆ ಕೈಬಿಟ್ಟು ಬೇರೆರೀತಿಯ ಕಾರ್ಯಕ್ರಮ ರೂಪಿಸಬೇಕಿತ್ತು.
ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಿಂದ ಮೆರವಣಿಗೆ ಹೊರಟ ವಿದ್ಯಾರ್ಥಿನಿಯರು ಅರ್ಧ ದಾರಿ ಬರುವಲ್ಲಿ ಹೈರಾಣಾಗಿ ಉಸ್ಸಪ್ಪಾ ಎಂದು ಉಸಿರು ಬಿಡುತ್ತಿದ್ದರು, ಇದು ಸಾಲದು ಎಂಬಂತೆ ಅಭ್ಯಾಸವಿಲ್ಲದೆ ಉಟ್ಟ ಸೀರೆಯ ನೆರಿಗೆಯನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ತಲೆ ಮೇಲೆ ಇರುವ ಚೊಂಬನ್ನು ಹಿಡಿದು ಸರ್ಕಸ್ ಮಾಡುತ್ತಾ, ಓಲಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು.
ಬೆರಳೆಣಿಕೆ ಶಿಕ್ಷಕರು: ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮೆರವಣಿಗೆ ಸಂದರ್ಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಕರ ಸಮಾರಂಭದ ಮೆರವಣಿಗೆಯಲ್ಲಿ ಶಿಕ್ಷಕರೆ ಪಾಲ್ಗೊಳ್ಳದೆ ನೂರಾರು ವಿದ್ಯಾರ್ಥಿನಿಯರಿಗೆ ಕಳಸ ಹೊರೆಸಿ ಮುಂದೆ ಬಿಟ್ಟು ಬೆರಳೆಣಿಕೆ ಶಿಕ್ಷಕರು ಹಿಂದೆ ಮೆರವಣಿಗೆ ಹೊರಟಿದ್ದು ಸರಿಯೇ ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದರು.